ಸಿನಿವಾಣಿ

ನಿಖಿಲ್​ ಚಿತ್ರದ ಹೆಸರೇನು? ಶುಕ್ರವಾರ ಸಿಗಲಿದೆ ಉತ್ತರ

ಮದುವೆಗೂ ಮುನ್ನ ನಿಖಿಲ್​ ಕುಮಾರ್​ ಅಭಿನಯದ ಚಿತ್ರವೊಂದು ಸೆಟ್ಟೇರಿದ್ದು ನೆನಪಿರಬಹುದು. ಬಸವನಗುಡಿಯ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವಾಗಿದ್ದು, ಕೆಲವು ದಿನಗಳ ಚಿತ್ರೀಕರಣ ಸಹ ಆಗಿತ್ತು.

ಈಗ್ಯಾಕೆ ಈ ಚಿತ್ರದ ವಿಷಯ ಎಂಬ ಪ್ರಶ್ನೆ ಬರಬಹದು. ವಿಷಯ ಏನೆಂದರೆ, ಲಾಕ್​ಡೌನ್​ನಿಂದ ಈ ಚಿತ್ರೀಕರಣ ನಿಂತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಮಧ್ಯ, ಇದೇ ಶುಕ್ರವಾರ ಅಂದರೆ ಸೆಪ್ಟೆಂಬರ್​ 11ರಂದು ಚಿತ್ರದ ಫಸ್ಟ್​​ ಲುಕ್​ ಮತ್ತು ಮೋಷನ್​ ಪೋಸ್ಟರ್​ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ.

ಸದ್ಯಕ್ಕೆ ಎನ್​ಕೆ 04 ಎಂಬ ಹೆಸರಿನಲ್ಲಿ ಪ್ರಾರಂಭವಾಗಿರುವ ನಿಖಿಲ್​ ಕುಮಾರ್​ ಅಭಿನಯದ ಹೊಸ ಚಿತ್ರದ ಹೆಸರು, ಫಸ್ಟ್​ ಲುಕ್​ ಮತ್ತು ಮೋಷನ್​ ಪೋಸ್ಟರ್​, ಇದೇ ಶುಕ್ರವಾರದಂದು ಯೂಟ್ಯೂಬ್​ನ ಲಹರಿ ಮ್ಯೂಸಿಕ್​ ಚಾನಲ್​ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಅಂದಹಾಗೆ, ಈ ಚಿತ್ರವನ್ನು ಲಹರಿ ಫಿಲಂಸ್​ನಡಿ ಚಂದ್ರು ಮನೋಹರನ್​ ನಿರ್ಮಿಸುತ್ತಿದ್ದು, ತೆಲುಗಿನ ಜನಪ್ರಿಯ ನಿರ್ದೇಶಕ ವಿಜಯ್​ ಕುಮಾರ್​ ಕೊಂಡಾ ಅವರು ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ.

ನಿಖಿಲ್​ಗೆ ನಾಯಕಿಯಾಗಿ ಕಾಶ್ಮೀರಾ ಪರದೇಶಿ ನಟಿಸುತ್ತಿದ್ದು, ಕಿರುತೆರೆಯಲ್ಲಿ ಹೆಸರು ಮಾಡಿರುವ ಸಂಪದ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಸಾಕಷ್ಟು ನಟ-ನಟಿಯರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತವಿದ್ದು, ಶ್ರೀಷ ಕೂದುವಳ್ಳಿ ಛಾಯಾಗ್ರಹಣ ಮಾಡುತ್ತಿದ್ದಾರೆ.