ಸಿನಿವಾಣಿ

ದಿಗಂತ್​ ಅಭಿನಯದ ಹೊಸ ಚಿತ್ರದ ಹೆಸರು ಹೀಗಿದೆ ...

ಬೆಂಗಳೂರು: ಲಾಕ್​ಡೌನ್​ ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಈ ದಿಗಂತ್​ ಮತ್ತು ಐಂದ್ರಿತಾ ರೇ ಅಭಿನಯದ ಈ ಹೊಸ ಚಿತ್ರ ಮುಗಿದು, ಬಿಡುಗಡೆಗೆ ಅಣಿಯಾಗಬೇಕಿರುತಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರದ ಚಿತ್ರೀಕರಣ ಮುಂದಕ್ಕೆ ಸಾಗಲಿಲ್ಲ. ಇದೀಗ ಲಾಕ್​ಡೌನ್​ ಮುಗಿದು, ಚಿತ್ರೀಕರಣ ಚಟುವಟಿಕೆಗಳೆಲ್ಲಾ ಸಹಜ ಸ್ಥಿತಿಗೆ ಬರುತ್ತಿದ್ದಂತೆಯೇ, ಈ ಚಿತ್ರದ ಕೆಲಸಗಳು ಸಹ ಪ್ರಾರಂಭವಾಗಿದೆ.

ಮೊದಲ ಹಂತವಾಗಿ ಈ ಚಿತ್ರದ ಹೆಸರು ಬಿಡುಗಡೆಯಾಗಿದೆ. 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎಂಬ ವಿಭಿನ್ನ ಶೀರ್ಷಿಕೆ ಮತ್ತು ಚಿತ್ರದ ಫಸ್ಟ್​ ಲುಕ್​ನ್ನು ಇಂದು ಬೆಳಿಗ್ಗೆ ನಟ-ನಿರ್ದೇಶಕ ಉಪೇಂದ್ರ ಅವರು ಬಿಡುಗಡೆ ಮಾಡಿದ್ದಾರೆ. ಇನ್ನು ನವೆಂಬರ್​ನಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಬೆಂಗಳೂರಲ್ಲದೆ ಸಿಗಂದೂರು, ಸಾಗರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

ಈ ಚಿತ್ರದಲ್ಲಿ ದಿಗಂತ್​ ಅಡಕೆ ಬೆಳಗಾರನಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಐಂದ್ರಿತಾ ರೇ ಮತ್ತು 'ಪುಟ್ಟಗೌರಿ ಮದುವೆ' ಮತ್ತು 'ಕನ್ನಡತಿ' ಖ್ಯಾತಿಯ ರಂಜಿನಿ ರಾಘವನ್​ ಸಹ ನಟಿಸುತ್ತಿದ್ದಾರೆ. ಮಿಕ್ಕಂತೆ, ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಈ ಹಿಂದೆ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿರುವ ವಿನಾಯಕ ಕೋಡ್ಸರ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಇನ್ನು, ಉಪೇಂದ್ರ ಅಭಿನಯದ 'ಎ' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ಸಿಲ್ಕ್​ ಮಂಜು, ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಜ್ವಲ್​ ಪೈ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ನಂದಕಿಶೋರ್​ ಎನ್​ ರಾವ್​ ಅವರ ಛಾಯಾಗ್ರಹಣವಿದೆ.