ಸಿನಿವಾಣಿ

ಉಪ್ಪಿ-ಹರಿಪ್ರಿಯಾ ಹೊಸ ಚಿತ್ರಕ್ಕೆ ಹೆಸರು ಫಿಕ್ಸ್​ ಆಯ್ತು ...

ಬೆಂಗಳೂರು: ಉಪೇಂದ್ರ ಅಭಿನಯದಲ್ಲಿ ಕೆ. ಮಾದೇಶ್​ ಹೊಸ ಚಿತ್ರ ನಿರ್ದೇಶಿಸುತ್ತಾರೆ ಮತ್ತು ಈ ಚಿತ್ರದಲ್ಲಿ ಉಪ್ಪಿಗೆ ನಾಯಕಿಯಾಗಿ ಹರಿಪ್ರಿಯಾ ನಟಿಸುತ್ತಾರೆ ಎಂಬ ಸುದ್ದಿಯೊಂದು ಲಾಕ್​ಡೌನ್​ಗೂ ಮುಂಚೆಯೇ ಕೇಳಿ ಬಂದಿತ್ತು.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಜೂನ್​-ಜುಲೈ ಹೊತ್ತಿಗೆ ಚಿತ್ರ ಶುರುವಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರ ಶುರುವಾಗುವುದಕ್ಕೆ ತಡವಾಯಿತು. ಉಪೇಂದ್ರ ಅವರು ಈಗೊಪ್ಪಿಕೊಂಡಿರುವ ಒಂದಿಷ್ಟು ಚಿತ್ರಗಳ ಕೆಲಸ ಮುಗಿಯುತ್ತಿದ್ದಂತೆಯೇ, ಈ ಚಿತ್ರ ಶುರುವಾಗಲಿದೆ.

ಈ ಮಧ್ಯೆ, ನಾಳೆ ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಹೆಸರು ಘೋಷಣೆಯಾಗಲಿದೆ. ಇದೊಂದು ಮಾಸ್​ ಚಿತ್ರವಾಗಿದ್ದು, ಚಿತ್ರಕ್ಕೆ ಮಾಸ್​ ಶೀರ್ಷಿಕೆಯನ್ನೇ ಇಡಲಾಗಿದೆ. ಅಂದಹಾಗೆ, ಈ ಚಿತ್ರದ ಹೆಸರೇನು ಗೊತ್ತಾ? 'ಲಗಾಮ್​'.

'ಲಗಾಮ್​', ಮಾದೇಶ್​ ಮತ್ತು ಉಪೇಂದ್ರ ಜೋಡಿಯ ಎರಡನೆಯ ಚಿತ್ರ. ಈ ಹಿಂದೆ, ಉಪೇಂದ್ರ ಅಭಿನಯದಲ್ಲಿ ಮಾದೇಶ್​, 'ಉಪ್ಪಿ-ರುಪಿ' ಎಂಬ ಚಿತ್ರ ಶುರು ಮಾಡಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ಜೋರಾಗಿಯೇ ನಡೆದಿತ್ತು. ಆದರೆ, ಕಾರಣಾಂತರಗಳಿಂದ ಈ ಚಿತ್ರ ಮುಂದುವರೆಯಲಿಲ್ಲ.

ಈಗ ಆ ಚಿತ್ರವನ್ನು ಬಿಟ್ಟು, ಇನ್ನೊಂದು ಕಥೆಯೊಂದಿಗೆ ವಾಪಸ್ಸು ಬಂದಿದ್ದಾರೆ ಮಾದೇಶ್​. ಶರಣ್​ ಮತ್ತು ಚಿಕ್ಕಣ್ಣ ಅಭಿನಯದ 'ರಾಜ್​​-ವಿಷ್ಣು' ನಂತರ, ಅವರು ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಮೂರು ವರ್ಷಗಳ ನಂತರ ಅವರು 'ಲಗಾಮ್​' ಹಿಡಿದು ಎಂಟ್ರಿ ಕೊಡುತ್ತಿದ್ದಾರೆ.

ಅಂದಹಾಗೆ, ಈ ಚಿತ್ರ ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷ ಪ್ರಾರಂಭವಾಗುವ ಸಾಧ್ಯತೆ ಇದೆ. ಎಲ್ಲಕ್ಕಿಂತ ಮೊದಲು, 'ಕಬ್ಜ' ಚಿತ್ರದ ಬಾಕಿ ಚಿತ್ರೀಕರಣವನ್ನು ಉಪೇಂದ್ರ ಮುಗಿಸಬೇಕಾಗಿದ್ದು, ಆ ಚಿತ್ರದ ನಂತರ ಅವರು ಬೇರೆ ಚಿತ್ರಗಳ ಕಡೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.