Nandamuri Balakrishna : ಡಾಕು ಮಹಾರಾಜ್ ಚಿತ್ರದ ಅದ್ಭುತ ಯಶಸ್ಸಿನಿಂದಾಗಿ ಟಾಲಿವುಡ್ ಸೂಪರ್ಸ್ಟಾರ್ ನಂದಮೂರಿ ಬಾಲಕೃಷ್ಣ ಅವರು ಸಂತಸದಲ್ಲಿದ್ದಾರೆ. ಜನವರಿ 12ರಂದು ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾದ ಈ ಚಿತ್ರವು ಈಗಾಗಲೇ ಸುಮಾರು 130 ಕೋಟಿಗೂ ಅಧಿಕ ಹಣ ಗಳಿಸಿದೆ.
ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರವನ್ನು ನಾಗ ವಂಶಿ ಅವರು ನಿರ್ಮಿಸಿದ್ದಾರೆ. ಚಿತ್ರದ ಯಶಸ್ಸಿನ ಭಾಗವಾಗಿ, ಸಿನಿಮಾ ತಂಡವು ಇತ್ತೀಚೆಗೆ ನಿರೂಪಕಿ ಸುಮಾ ಅವರೊಂದಿಗೆ ಸಂದರ್ಶನವೊಂದರಲ್ಲಿ ಭಾಗವಹಿಸಿತ್ತು. ಈ ವೇಳೆ ಬಾಲಯ್ಯ ಅವರು ಭಾನುವಾರದ ಜತೆಗಿರುವ ವಿಶೇಷ ಭಾವನೆಯನ್ನು ಹಂಚಿಕೊಂಡರು.
ನಿಜ ಜೀವನದಲ್ಲಿ ನಾನೊಂದು ನಂಬಿಕೆಯನ್ನು ಅನುಸರಿಸುತ್ತಿದ್ದೇನೆ. ಅದೇನೆಂದರೆ, ಭಾನುವಾರದಂದು ನಾನು ಕಪ್ಪು ಬಟ್ಟೆಯನ್ನು ಧರಿಸುವುದಿಲ್ಲ. ಭಾನುವಾರದಂದು ಕಪ್ಪು ಬಣ್ಣವು ನನಗೆ ಅಪಾಯಕಾರಿ. ಕಪ್ಪು ಬಟ್ಟೆ ಧರಿಸಿದರೆ ಏನೋ ದೊಡ್ಡ ಅಪಾಯ ಸಂಭವಿಸುತ್ತದೆ ಎಂಬ ಭಾವನೆ ಇದೆ. ನನ್ನದು ಮೂಲ ನಕ್ಷತ್ರ ಆಗಿರುವುದರಿಂದ, ಭಾನುವಾರದಂದು ಕಪ್ಪು ಒಳ್ಳೆಯದಲ್ಲ ಎಂದು ಕೆಲವರು ಹೇಳುತ್ತಾರೆ. ಆದ್ದರಿಂದ ನಾನದನ್ನು ಅನುಸರಿಸುತ್ತೇನೆ ಎಂದರು.
ಒಮ್ಮೆ ಆದಿತ್ಯ 369 ಚಿತ್ರೀಕರಣದ ಸಮಯದಲ್ಲಿ, ನಾನು ಭಾನುವಾರದಂದು ಕಪ್ಪು ಉಡುಗೆ ಧರಿಸಬೇಕಾಯಿತು. ಆ ಉಡುಗೆ ಬೇಡ ಎಂದು ನಾನು ಹೇಳಿದ್ದೆ. ಆದರೆ, ನಿರ್ದೇಶಕರು ಒತ್ತಾಯ ಮಾಡಿದ್ದರಿಂದ ಧರಿಸಬೇಕಾಯಿತು. ಏನಾದರೂ ಕೆಟ್ಟದ್ದು ಸಂಭವಿಸಲಿದೆ ಎಂದು ನನಗೆ ಮೊದಲೇ ತಿಳಿದಿತ್ತು. ಅದೇ ದಿನ ಬಾಲಸುಬ್ರಮಣ್ಯಂ ಕೂಡ ಶೂಟಿಂಗ್ ಸೆಟ್ಗೆ ಬಂದರು. ನಾನು ಅವರ ಮುಂದೆಯೇ ಬಿದ್ದು ಬೆನ್ನು ಮುರಿದುಕೊಂಡೆ. ಇದೆಲ್ಲ ನನ್ನಿಂದಲೇ ಆಗಿದ್ದು ಅಂದುಕೊಂಡು ಬಾಲಸುಬ್ರಮಣ್ಯಂ ಅವರು ಮತ್ತೆ ಶೂಟಿಂಗ್ ಸೆಟ್ಗೆ ಬರಲಿಲ್ಲ ಎನ್ನುವ ಮೂಲಕ ಬಾಲಯ್ಯ ಅವರು ಭಾನುವಾರದ ಜತೆಗಿನ ತಮ್ಮ ನಂಬಿಕೆಯನ್ನು ಹಂಚಿಕೊಂಡರು.
ಅಂದಹಾಗೆ ನಿರೂಪಕಿ ಸುಮಾ ಮತ್ತು ಚಿತ್ರ ತಂಡದೊಂದಿಗಿನ ಸಂದರ್ಶನ ತುಂಬಾ ಮೋಜಿನಿಂದ ಕೂಡಿತ್ತು. ಬಾಲಕೃಷ್ಣ ಜೊತೆಗೆ, ಚಿತ್ರದ ನಿರ್ದೇಶಕ ಬಾಬಿ, ನಾಯಕಿಯರಾದ ಪ್ರಜ್ಞಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್ ಮತ್ತು ಸಂಗೀತ ನಿರ್ದೇಶಕ ಥಮನ್ ಭಾಗವಹಿಸಿದ್ದರು. ಶೂಟಿಂಗ್ ಸಮಯದಲ್ಲಿ ನಾನು ಪ್ರೊಡಕ್ಷನ್ ಫುಡ್ ತಿನ್ನುತ್ತೇನೆ ಎಂದು ಬಾಲಯ್ಯ ಬಹಿರಂಗಪಡಿಸಿದರು. ನಮ್ಮ ಮನೆಯ ಪಕ್ಕದಲ್ಲಿ ಶೂಟಿಂಗ್ ನಡೆಯುತ್ತಿದ್ದರೂ, ಅಲ್ಲೇ ಹೋಗಿ ಊಟ ಮಾಡುತ್ತೇನೆ ಎಂದರು.
ಬಾಲಕೃಷ್ಣ ಅವರು ಜಾತಕದ ಮೇಲೆ ತುಂಬಾ ನಂಬಿಕೆ ಇಡುತ್ತಾರೆ ಎಂಬುದು ಹಲವರಿಗೆ ತಿಳಿದಿದೆ. ಯಾವುದೇ ಒಳ್ಳೆಯ ಕೆಲಸವನ್ನು ಆರಂಭಿಸಬೇಕಾದರೆ, ಶುಭ ಸಮಯಗಳನ್ನು ಅನುಸರಿಸಿ ಪ್ಲಾನ್ ಮಾಡುತ್ತಾರೆ. ಚಲನಚಿತ್ರ ಬಿಡುಗಡೆ ದಿನಾಂಕಗಳು ಮತ್ತು ಟ್ರೇಲರ್ ಬಿಡುಗಡೆ ದಿನಾಂಕಗಳ ವಿಷಯಕ್ಕೆ ಬಂದಾಗ ಬಾಲಯ್ಯ ಅವರು ತಮ್ಮ ಭಾವನೆಗಳಿಗೆ ಆದ್ಯತೆ ನೀಡುತ್ತಾರೆ.ಬಾಲಯ್ಯ ಅವರು ಯಾವಾಗಲೂ ಕುತ್ತಿಗೆಗೆ ರುದ್ರಾಕ್ಷಿಯನ್ನು ಧರಿಸುತ್ತಾರೆ ಮತ್ತು ಕೈಯಲ್ಲಿ ಜಾತಕ ಉಂಗುರಗಳನ್ನು ಧರಿಸುತ್ತಾರೆ. ಪ್ರತಿದಿನ ತಮ್ಮ ಮನೆಯಲ್ಲಿ ಬೆಳಗ್ಗೆ ಬೇಗನೆ ಎದ್ದು ಪೂಜಾ ಕಾರ್ಯಕ್ರಮವನ್ನು ಮುಗಿಸುತ್ತಾರೆ. ಆನಂತರ ತಮ್ಮ ದೈನಂದಿನ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾರೆ. (ಏಜೆನ್ಸೀಸ್)