Keerthy Suresh : ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಸ್ನೇಹಿತ ಆಂಟೋನಿ ಥಟ್ಟಿಲ್ ಅವರನ್ನು ವಿವಾಹವಾಗಿ ಕೆಲವೇ ದಿನಗಳು ಕಳೆದಿವೆ. ನವದಂಪತಿ ಈಗಲೂ ಶುಭ ಹಾರೈಕೆಗಳನ್ನು ಸ್ವೀಕರಿಸುತ್ತಿದ್ದಾರೆ. ಇದರ ನಡುವೆ ನಿರ್ಮಾಪಕ ಹಾಗೂ ನಟ ವಿಜಯ್ ಅವರ ಪರ್ಸನಲ್ ಮ್ಯಾನೇಜರ್ ಆಗಿರುವ ಜಗದೀಶ್ ಪಳನಿಸ್ವಾಮಿ ಶೇರ್ ಮಾಡಿರುವ ಪೋಸ್ಟ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಕೀರ್ತಿ ಅವರ ಮದುವೆಯನ್ನು 10 ವರ್ಷಗಳ ಹಿಂದೆಯೇ ಯೋಜಿಸಲಾಗಿತ್ತು ಎಂದು ಜಗದೀಶ್ ಹೇಳಿದ್ದಾರೆ.
ಇದು ಕನಸುಗಳನ್ನು ಮೀರಿದ ಕಥೆ. 2015ರಲ್ಲಿ ನಾವು ಒಬ್ಬರನ್ನೊಬ್ಬರು ತುಂಬಾ ದ್ವೇಷಿಸುತ್ತಿದ್ದೆವು. ಆದರೆ, ಅದರ ನಂತರ ನಮ್ಮಿಬ್ಬರ ಮಧ್ಯೆ ಅತ್ಯುತ್ತಮ ಒಡಹುಟ್ಟಿದ ಸಂಬಂಧ ಬೆಳೆಯಿತು. ಇಂದು ನೀವು ನನ್ನ ಜೀವನದ ಅನಿವಾರ್ಯ ಭಾಗವಾಗಿದ್ದೀರಿ. 10 ವರ್ಷಗಳ ಹಿಂದೆಯೇ ನಿಮ್ಮ ಮದುವೆಯನ್ನು ಯೋಜಿಸಿದ್ದು ನನಗೆ ಈಗಲೂ ನೆನಪಿದೆ. ಇಂದು ನಡೆದ ನಿಮ್ಮ ಮದುವೆಯಲ್ಲಿ ನನಗಿಂತ ಖುಷಿಪಟ್ಟವರು ಯಾರಾದರೂ ಇರುತ್ತಾರೆಯೇ? ನಿಮ್ಮ ಮದುವೆ ನಾನು ಹತ್ತು ವರ್ಷದಿಂದ ಕಾಣುತ್ತಿರುವ ಕನಸನ್ನು ಜೀವಂತಗೊಳಿಸಿದಂತಿದೆ. ಆಂಟೋನಿ ಅವರನ್ನು ಭೇಟಿಯಾಗುವವರೆಗೂ ಕೀರ್ತಿಯನ್ನು ಮದುವೆಯಾಗುವ ವ್ಯಕ್ತಿ ಅದೃಷ್ಟಶಾಲಿ ಎಂದು ಭಾವಿಸಿದ್ದೆ. ಆದರೆ, ಆಂಟೋನಿ ಅವರಂತಹವರನ್ನು ಪಡೆದ ಕೀರ್ತಿ ನಿಜಕ್ಕೂ ಅದೃಷ್ಟಶಾಲಿ. ಕೀರ್ತಿಗೆ ಅಭಿನಂದನೆಗಳು. ನನ್ನ ಆನಂದಭಾಷ್ಪವನ್ನು ಮರೆಮಾಡಲು ನಾನು ಕನ್ನಡಕವನ್ನು ಧರಿಸಿದ್ದೇನೆ ಎಂದು ಜಗದೀಶ್ ಪಳನಿಸ್ವಾಮಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಮದುವೆಯ ಫೋಟೋಗಳನ್ನು ಸಹ ಶೇರ್ ಮಾಡಿಕೊಂಡಿದ್ದಾರೆ.
ಅಂದಹಾಗೆ ಜಗದೀಶ್ ಅವರು 2015ರಲ್ಲಿ ನಟ ವಿಜಯ್ ಅವರ ಮ್ಯಾನೇಜರ್ ಆದರು. ಇದಾದ ನಂತರ ಕೀರ್ತಿ ಸುರೇಶ್, ಸಮಂತಾ, ರಶ್ಮಿಕಾ ಮಂದಣ್ಣ, ಕಲ್ಯಾಣಿ ಪ್ರಿಯದರ್ಶನ್, ಮಾಳವಿಕಾ ಮೋಹನನ್ ಹಾಗೂ ಅರ್ಜುನ್ ದಾಸ್ ಅವರ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದಾರೆ. ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್ ಕಂಪನಿ ರೂಟ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಜಗದೀಶ್, ವಿಜಯ್ ಅವರ ಮಾಸ್ಟರ್ ಮತ್ತು ಲಿಯೋ ಚಿತ್ರಗಳ ಸಹ ನಿರ್ಮಾಪಕರಾಗಿದ್ದಾರೆ. ಜಗದೀಶ್ ನೇತೃತ್ವದ ಸಂಸ್ಥೆಯು ಕಲ್ಯಾಣ ಪ್ರಿಯದರ್ಶನ್ ಅಭಿನಯದ ಮೈಕಲ್ ಫಾತಿಮಾ ಚಿತ್ರವನ್ನೂ ನಿರ್ಮಿಸಿದೆ. ಈ ಬ್ಯಾನರ್‌ನ ಹೊಸ ಚಿತ್ರ ರಿವಾಲ್ವರ್ ರೀತಾ. ಇದರಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ.
ಹದಿನೈದು ವರ್ಷಗಳ ಡೇಟಿಂಗ್ ನಂತರ, ನಟಿ ಕೀರ್ತಿ ಸುರೇಶ್ ಮತ್ತು ಆಂಟೋನಿ ಥಟ್ಟಿಲ್ ಡಿ.12ರಂದು ಗೋವಾದಲ್ಲಿ ವಿವಾಹವಾದರು. ಹಿಂದು ಮತ್ತು ಕ್ರಿಶ್ಚಿಯನ್ ಎರಡೂ ಸಂಪ್ರದಾಯದಂತೆ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾದರು. ಅಂದಹಾಗೆ ಕೀರ್ತಿ ಮತ್ತು ಆಂಟೋನಿ ಒಂದೇ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದರು. ಹೈಸ್ಕೂಲ್ ದಿನಗಳಲ್ಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆಂಟೋನಿ ಕೀರ್ತಿಗಿಂತ ಎರಡು ವರ್ಷ ದೊಡ್ಡವರು. ಕೀರ್ತಿಗೆ ಸದ್ಯ 32 ವರ್ಷ ಮತ್ತು ಆಂಟೋನಿಗೆ 34 ವರ್ಷ. ಕೊಚ್ಚಿ ಮೂಲದ ಆಂಟೋನಿ ದೋಹಾದಲ್ಲಿ ಉದ್ಯಮಿಯಾಗಿದ್ದಾರೆ. ಆಂಟೋನಿ ಕೊಚ್ಚಿ ಮೂಲದ ಆಸ್ಪರೋಸ್ ವಿಂಡೋಸ್ ಸಲ್ಯೂಷನ್ಸ್ ಎಂಬ ಕಂಪನಿಯ ಮಾಲೀಕರಾಗಿದ್ದಾರೆ.
ಅಂದಹಾಗೆ ಕೀರ್ತಿ ಸುರೇಶ್ ಮಲಯಾಳಂ ನಿರ್ಮಾಪಕ ಸುರೇಶ್ ಮತ್ತು ನಟಿ ಮೇನಕಾ ಅವರ ಪುತ್ರಿ. ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ಕೀರ್ತಿ ಮಲಯಾಳಂ ಚಿತ್ರ ಗೀತಾಂಜಲಿ ಮೂಲಕ ನಟಿಯಾಗಿ ಬಡ್ತಿ ಪಡೆದರು. ಸದ್ಯ ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್, ಸೂರ್ಯ, ವಿಕ್ರಮ್, ಶಿವಕಾರ್ತಿಕೇಯನ್, ನಾನಿ, ಮಹೇಶ್ ಬಾಬು ಸೇರಿದಂತೆ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್ ನಟನೆಯ ಡಬ್ಬಿಂಗ್ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ. ಪ್ರಸ್ತುತ ರಿವಾಲ್ವರ್ ರೀಟಾ ಮತ್ತು ಬೇಬಿ ಜಾನ್ ಚಿತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)