ಸಿನಿವಾಣಿ

ನನ್ನನ್ನು ಸ್ಟಾರ್ ಮಾಡಿದ್ದೇ ಥಿಯೇಟರ್; ಚಿತ್ರಮಂದಿರಗಳಲ್ಲೇ ‘ದೃಶ್ಯ 2’ ಬಿಡುಗಡೆಗೆ ರವಿಚಂದ್ರನ್ ಇಂಗಿತ

Webdesk - Ravikanth

ಬೆಂಗಳೂರು: ‘ನಾನು ಚಿತ್ರಮಂದಿರದಿಂದ ಬಂದವನು. ಥಿಯೇಟರ್​ಗಳೇ ನನ್ನನ್ನು ಈ ಹಂತಕ್ಕೆ ತಂದಿದ್ದು. ಹಾಗಾಗಿ, ನನ್ನ ಮೊದಲ ಪ್ರಾಶಸ್ಱ ಏನಿದ್ದರೂ ಅದು ಚಿತ್ರಮಂದಿರಗಳಿಗೆ ಮಾತ್ರ ...’ - ಹೀಗೆ ಒಟಿಟಿ ಬಗೆಗಿನ ತಮ್ಮ ಪರೋಕ್ಷ ನಿಲುವನ್ನು ಹೇಳಿಕೊಂಡಿದ್ದಾರೆ ನಟ-ನಿರ್ದೇಶಕ ರವಿಚಂದ್ರನ್. ಅವರ ಮಾತಿಗೆ ವೇದಿಕೆ ಕಲ್ಪಿಸಿದ್ದು ‘ದೃಶ್ಯ 2’ ಚಿತ್ರದ ಪತ್ರಿಕಾಗೋಷ್ಠಿ. ನಿರ್ದೇಶಕ ಪಿ. ವಾಸು, ನವ್ಯಾ ನಾಯರ್, ಆರೋಹಿ ನಾರಾಯಣ್, ಉನ್ನತಿ ಮುಂತಾದವರು ಹಾಜರಿದ್ದ ಈ ಪತ್ರಿಕಾಗೋಷ್ಠಿಯಲ್ಲಿ ರವಿಚಂದ್ರನ್, ಸಿನಿಮಾ ಸೇರಿ ಹಲವು ವಿಚಾರಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು.

ಸದ್ಯಕ್ಕೆ ಒಟಿಟಿ ಸಹವಾಸ ಬೇಡ: ಸ್ಯಾಂಡಲ್​ವುಡ್​ನಲ್ಲಿ ಒಟಿಟಿ ವೇದಿಕೆಯ ಸೆಳೆತ ನಿಧಾನಕ್ಕೆ ಶುರುವಾಗಿದೆ. ಆದರೆ, ರವಿಚಂದ್ರನ್ ಮಾತ್ರ ಆ ಸೆಳೆತಕ್ಕೆ ಸಿಲುಕಿಲ್ಲವಂತೆ. ‘ನಾವೆಲ್ಲ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿಯೇ ನೋಡಿ ಬೆಳೆದವರು. ನನ್ನನ್ನು ಸ್ಟಾರ್ ಮಾಡಿದ್ದೇ ಥಿಯೇಟರ್. ಹಾಗಾಗಿ ನನ್ನ ಮೊದಲ ಪ್ರಾಶಸ್ಱ ಏನಿದ್ದರೂ ಅದು ಚಿತ್ರಮಂದಿರಕ್ಕೆ ಮಾತ್ರ. ಹಾಗಾಗಿ ಸದ್ಯಕ್ಕೆ ಒಟಿಟಿ ಸಹವಾಸ ಬೇಡ. ವಿಶ್ವದಲ್ಲೇ ಅತಿ ಅಗ್ಗದ ಮನರಂಜನೆ ಎಂದರೆ ಅದು ಸಿನಿಮಾ ಮಾತ್ರ. ಅದನ್ನು ಚಿತ್ರಮಂದಿರದಲ್ಲಿಯೇ ನೋಡಿ ಸವಿಯಬೇಕು’ ಎನ್ನುತ್ತಾರವರು.

ನನಗೆ ಎರಡೆರಡು ಕುಟುಂಬ: ‘ನನ್ನ ಕುಟುಂಬವನ್ನು ನಾನೆಷ್ಟು ಪ್ರೀತಿಸುತ್ತೇನೋ ಅಷ್ಟೇ ಪ್ರೀತಿಯನ್ನು ಈ ಕುಟುಂಬಕ್ಕೂ ನೀಡಿದ್ದೇನೆ. ಮತ್ತೊಂದು ಫ್ಯಾಮಿಲಿ ಸಿಕ್ಕಷ್ಟೇ ಖುಷಿಯಾಗಿದೆ. ಇದೀಗ ಚಿತ್ರದ ಶೂಟಿಂಗ್ ಮುಗಿದಿದೆ. 38 ದಿನ ಒಟ್ಟಿಗೆ ಕೆಲಸ ಮಾಡಿದ್ದೇವೆ. ಪ್ಯಾಕ್ ಅಪ್ ಮಾಡುತ್ತಿದ್ದಂತೆ ಸೆಟ್ ಹುಡುಗರು ಕಣ್ಣೀರು ಹಾಕಿದ್ದಾರೆ. ಅಷ್ಟೊಂದು ಬಾಂಧವ್ಯ ಬೆಳೆದಿತ್ತು. ನಿರ್ದೇಶಕರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಈ ಸಿನಿಮಾಕ್ಕೆ ಮಾತ್ರ ನನ್ನ ಫ್ರೀ ಡೇಟ್ಸ್ ನೀಡಿದ್ದೇನೆ. ಯಾವಾಗ ಕರೆದರೂ ನಾನು ಹಾಜರಿರುತ್ತೇನೆ’ ಎಂಬುದು ಅವರ ಮಾತು.

ರವಿಚಂದ್ರನ್ ಮತ್ತಷ್ಟು ಯಂಗ್ ಆಗಿದ್ದಾರೆ: ರವಿಚಂದ್ರನ್ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ ಪಿ. ವಾಸು, ‘2014ರಲ್ಲಿ ‘ದೃಶ್ಯ’ ಸಿನಿಮಾ ತೆರೆಗೆ ಬಂದಿತ್ತು. ಇದೀಗ ಏಳು ವರ್ಷದ ಬಳಿಕ ಸೀಕ್ವೆಲ್ ಸಿದ್ಧವಾಗಿದೆ. ಆವತ್ತು ಹೇಗಿದ್ರೋ ಇವತ್ತೂ ರವಿಚಂದ್ರನ್ ಹಂಗೇ ಇದ್ದಾರೆ. ಸೀಕ್ವೆಲ್ ಎಂಬುದಕ್ಕಿಂತ ಪ್ರೀಕ್ವೆಲ್ ಎನ್ನಬಹುದು. ಅಷ್ಟೊಂದು ಯಂಗ್ ಆಗಿದ್ದಾರೆ. ಕನ್ನಡದ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಸಣ್ಣಪುಟ್ಟ ಬದಲಾವಣೆಗಳಾಗಿವೆ. ಸಾಧು ಕೋಕಿಲ ಮತ್ತೆ ಮುಂದುವರಿದ್ದಾರೆ’ ಎನ್ನುತ್ತಾರವರು.

ಪ್ರೇಕ್ಷಕರು ಮತ್ತೆ ಚಿತ್ರಮಂದಿರಕ್ಕೆ ಬರ್ತಾರೆ: ಕೋವಿಡ್ ಹಿನ್ನೆಲೆಯಲ್ಲಿ ಚಿತ್ರಮಂದಿರದಿಂದ ದೂರವೇ ಉಳಿದಿದ್ದ ಪ್ರೇಕ್ಷಕರನ್ನು ‘ದೃಶ್ಯ 2’ ಮೂಲಕ ಮತ್ತೆ ಕರೆತರುತ್ತಾರಂತೆ ರವಿಚಂದ್ರನ್. ‘2014ರಲ್ಲಿ ತೆರೆಗೆ ಬಂದಿದ್ದ ‘ದೃಶ್ಯ’ ಸಿನಿಮಾ ಹೊಸ ದಾಖಲೆ ಬರೆಯಿತು. ಮನೆ ಮಂದಿಯನ್ನೆಲ್ಲ ಚಿತ್ರಮಂದಿರಕ್ಕೆ ಕರೆ ತಂದಿತ್ತು. ಇದೀಗ ಕೋವಿಡ್ ಸಂಕಷ್ಟ ಸ್ಥಿತಿ ಎದುರಾಗಿದೆ. ಪ್ರಕರಣಗಳು ಕಡಿಮೆಯಾದರೂ ಜನ ಥಿಯೇಟರ್​ಗೆ ಬರುತ್ತಿಲ್ಲ. ‘ದೃಶ್ಯ 2’ ಸಿದ್ಧವಾಗಿದೆ. ಈ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಕರೆತರುತ್ತೇನೆ’ ಎನ್ನುತ್ತಾರೆ.

ಮತ್ತೆ ಕನ್ನಡಕ್ಕೆ ಬಂದಿದ್ದು ಖುಷಿ ಇದೆ: ಚಿತ್ರದ ನಾಯಕಿ ನವ್ಯಾ ನಾಯರ್ ‘ದೃಶ್ಯ 2’ ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಆ ಖುಷಿಯನ್ನು ಅವರ ಬಾಯಲ್ಲಿಯೇ ಕೇಳಿ. ‘ನಾನು ಮೂಲ ಮಲಯಾಳಿಯಾದರೂ ಬೇರೆ ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ಕನ್ನಡದಲ್ಲಿ ಸಿಕ್ಕಷ್ಟು ಪ್ರೀತಿ ಬೇರೆಲ್ಲಿಯೂ ಸಿಕ್ಕಿಲ್ಲ. ಅದರಲ್ಲೂ ಈ ತಂಡದ ಜತೆಗಿದ್ದಿದ್ದೇ ದೊಡ್ಡ ಖುಷಿ. ನನ್ನ ಕುಟುಂಬದ ಜತೆಗೆ ಕೆಲಸ ಮಾಡಿದಂತಾಯಿತು. ರವಿಚಂದ್ರನ್ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲದಿದ್ದರೂ, ಸಿನಿಮಾ ವಿಚಾರದಲ್ಲಿನ ಅವರ ಬದ್ಧತೆ ನನಗಿಷ್ಟ’ ಎಂದಿದ್ದಾರೆ.