ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾವನ್ನು ಹೊಂಬಾಳೆ ಫಿಲಂಸ್ ಘೋಷಣೆ ಮಾಡಿದೆ. ಈ ಮೂಲಕ ಸಲಾರ್ ಶೀರ್ಷಿಕೆಯ ಸಿನಿಮಾದಿಂದ ಪ್ರಭಾಸ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ನಾಯಕರಾಗುತ್ತಿದ್ದಾರೆ. ಸದ್ಯ ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಬಿಡುಗಡೆ ಮಾಡಿಕೊಂಡಿರುವ ತಂಡ, ಈ ಚಿತ್ರವನ್ನು ಇಂಡಿಯನ್ ಸಿನಿಮಾ ಎಂದು ಘೋಷಿಸಿಕೊಂಡಿದೆ. ಇದೀಗ ಇದೇ ಸಿನಿಮಾದ ಭಾಗವಾಗಲು ಕಲಾವಿದರಿಗೆ ಆಡಿಷನ್ ಕರೆದಿದೆ ತಂಡ.
ಇದನ್ನೂ ಓದಿ: ಮಕ್ಕಳ ಚಿತ್ರದ ಟೀಸರ್ ಬಿಡುಗಡೆ ಮಾಡಿದ ನಾದಬ್ರಹ್ಮ
ಹೌದು, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್, ಕನ್ನಡದ ಜತೆಗೆ ಭಾರತದ ಹತ್ತಾರು ಭಾಷೆಗಳಲ್ಲಿ ತೆರೆಗೆ ಬರಲಿದೆ. 100 ಕೋಟಿಗೂ ಅಧಿಕ ಬಜೆಟ್ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಎಲ್ಲ ಭಾಷಿಕರಿಗೂ ಈ ಚಿತ್ರದಲ್ಲಿ ನಟಿಸುವ ಅವಕಾಶವನ್ನು ನಿರ್ಮಾಣ ಸಂಸ್ಥೆ ಮಾಡಿಕೊಡುತ್ತಿದೆ. ಅದರಂತೆ ಇದೀಗ ಹೈದರಾಬಾದ್ನಲ್ಲಿ ಆಡಿಷನ್ ಕರೆದಿದ್ದು, ಯಾವುದಾದರೂ ಭಾಷೆಯಲ್ಲಿ ಒಂದು ನಿಮಿಷದ ವಿಡಿಯೋ ಮಾಡಿ ವಾಟ್ಸಾಪ್ ಮೂಲಕ ಕಳುಹಿಸಿಕೊಡಬೇಕು.
ಡಿಸೆಂಬರ್ 15ರಂದು ಬೆಳಗ್ಗೆ 9ರಿಂದ 6ರವರೆಗೂ ಆಡಿಷನ್ ಪ್ರಕ್ರಿಯೆ ನಡೆಯಲಿದ್ದು, ಅದಾದ ಬಳಿಕ ಬೆಂಗಳೂರು ಮತ್ತು ಚೆನ್ನೈನಲ್ಲಿಯೂ ಆಡಿಷನ್ ನಡೆಯಲಿದೆ ಎಂದು ತಂಡ ಹೇಳಿಕೊಂಡಿದೆ. ವಿಜಯ್ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಸ್ಟಾರ್ ಕಲಾವಿದರ ದಂಡೇ ಚಿತ್ರದಲ್ಲಿರಲಿದೆ. ಸದ್ಯ ಪ್ರಭಾಸ್ ಕೈಯಲ್ಲಿ ಪ್ರಸ್ತುತ ಮೂರು ಸಿನಿಮಾಗಳಿವೆ. ಅವುಗಳಲ್ಲಿ ರಾಧೆ ಶ್ಯಾಮ್ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಅದಾದ ಬಳಿಕ ಸಲಾರ್ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಜತೆಯಲ್ಲಿ ಆದಿಪುರುಷ್ ಮತ್ತು ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದ ಭಾಗವಾಗಲಿದ್ದಾರೆ.