ಸಿನಿವಾಣಿ

8 ರಾಜ್ಯದಲ್ಲಿ ತೆರಿಗೆ ವಿನಾಯತಿ ಪಡೆದ ದಿ ಕಾಶ್ಮೀರ್​ ಫೈಲ್ಸ್ ಒಂದು ವಾರದಲ್ಲಿ ಗಳಿಸಿದ್ದೆಷ್ಟು ಕೋಟಿ?

ಭಾರತೀಯ ಸಿನಿರಂಗದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಹೊಸ ಸಂಚಲನ ಮೂಡಿಸಿದೆ. ಮಾ. 11 ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ಕೇವಲ ಒಂದು ವಾರ ಕಳೆಯುವುದರೊಳಗೆ ಹಲವು ದಾಖಲೆಗಳನ್ನು ಮಾಡಿದ್ದು, ಗಲ್ಲಾಪೆಟ್ಟಿಗೆ ಉಕ್ಕಿ ಹರಿಯುವಂತೆ ಮಾಡಿದೆ. ಹೌದು, ನಮ್ಮ ದೇಶದ 8 ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಪಡೆದಿರುವ ಈ ಸಿನಿಮಾ ಕೇವಲ 7 ದಿನಗಳಲ್ಲಿ ಬರೋಬ್ಬರಿ 106.80 ಕೋಟಿ ಗಳಿಸಿದೆ. ಬಾಲಿವುಡ್​ನ ದೊಡ್ಡ ಸ್ಟಾರ್​ ನಟರ ಸಿನಿಮಾಗಳನ್ನೂ ಬೀಟ್ ಮಾಡಿ ಈ ಸಿನಿಮಾ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ.
ಅಂದಹಾಗೆ, ಮೊದಲ ದಿನ ಈ ಸಿನಿಮಾ ಕೇವಲ 3.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ, ಆರನೇ ದಿನದ ಅಂತ್ಯಕ್ಕೆ ಈ ಸಿನಿಮಾದ ಗಳಿಕೆ ಬರೋಬ್ಬರಿ 79 ಕೋಟಿ ರೂಪಾಯಿಗೆ ಏರಿಕೆ ಕಂಡಿತ್ತು. ಇದಕ್ಕೆ, ಕಾರಣ 8 ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಪಡೆದಿದ್ದು, ಜತೆಗೆ ಬಹುತೇಕ ಎಲ್ಲಾ ಬಿಜೆಪಿ ರಾಜಕಾರಣಿಗಳಿಂದ ಮೆಚ್ಚುಗೆ ಪಡೆದಿದ್ದು, ಈ ಸಿನಿಮಾಗೆ ಈಗ ಎಲ್ಲರೂ ಫಿದಾ ಆಗಿದ್ದಾರೆ. ಹೀಗಾಗಿ, ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ.
ಮೊದಲ ದಿನದಿಂದ ‘ದಿ ಕಾಶ್ಮೀರ್ ಫೈಲ್ಸ್’ ಕಲೆಕ್ಷನ್ ಹೀಗಿದೆ:
  • 1ನೇ ದಿನ - 3.55 ಕೋಟಿ
  • 2ನೇ ದಿನ - 8.50 ಕೋಟಿ
  • 3ನೇ ದಿನ - 15.10 ಕೋಟಿ
  • 4ನೇ ದಿನ - 15.05 ಕೋಟಿ
  • 5ನೇ ದಿನ - 18 ಕೋಟಿ
  • 6ನೇ ದಿನ - 19.05 ಕೋಟಿ
  • 7ನೇ ದಿನ - 18.05 ಕೋಟಿ
  • 8ನೇ ದಿನ - 19.15 ಕೋಟಿ
1990 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕಾಶ್ಮೀರ್ ಪಂಡಿತರ ಮೇಲಿನ ದೌರ್ಜನ್ಯ ಕುರಿತ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆ. ಇನ್ನು, ಈ ಸಿನಿಮಾ ಕಂಡ ಸಿನಿಪ್ರೇಕ್ಷಕರು ಬಹುತೇಕ ಭಾವುಕರಾಗಿದ್ದು, ಜನ ಥಿಯೇಟರ್​ಗಳಲ್ಲಿ ಬಿಕ್ಕಿ-ಬಿಕ್ಕಿ ಅಳುತ್ತಿರುವ ದೃಶ್ಯಗಳು ಕಂಡುಬಂದಿವೆ. ಎಲ್ಲಾ ರಾಜ್ಯಗಳಲ್ಲಿ ಬೇರೆ ಸಿನಿಮಾಗಳನ್ನು ಹಿಂದಿಕ್ಕಿ, ಎಲ್ಲಾ ಸ್ಕ್ರೀನ್​ಗಳಲ್ಲಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ 7 ನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಇನ್ನು, 8 ನೇ ದಿನ ಕೂಡಾ ಈ ಸಿನಿಮಾ ಬರೋಬ್ಬರಿ 19.15 ಕೋಟಿ ಗಳಿಸಿರುವುದು ವಿಶೇಷ.