ಕನ್ನಡದ ‘ಭುಜಂಗಯ್ಯನ ದಶಾವತಾರ’ ಸೇರಿ 50ಕ್ಕೂ ಅಧಿಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಖ್ಯಾತಿ ಪಲ್ಲವಿ ಜೋಶಿಗೆ ಸಲ್ಲುತ್ತದೆ. ‘ತಾಷ್ಕೆಂಟ್ ಫೈಲ್ಸ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ನಟನೆಗೆ ಎರಡು ಬಾರಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರಪ್ರಶಸ್ತಿ ಪಡೆದಿರುವ ಅವರು ಇದೀಗ ‘ದಿ ವ್ಯಾಕ್ಸೀನ್ ವಾರ್’ ಮೂಲಕ ವಾಪಸ್ಸಾಗಿದ್ದಾರೆ. ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು, ಇದೇ ಖುಷಿಯಲ್ಲಿ ಪಲ್ಲವಿ ಜೋಶಿ ವಿಜಯವಾಣಿ ಜತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
- ‘ದಿ ವ್ಯಾಕ್ಸೀನ್ ವಾರ್’ ಪ್ರಾರಂಭವಾಗಿದ್ದು ಹೇಗೆ?
- ಕರೊನಾ ಸಮಯದಲ್ಲಿ ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್) ಪ್ರಧಾನ ನಿರ್ದೇಶಕರಾಗಿದ್ದ ಬಲರಾಂ ಭಾರ್ಗವ್, ನಿವೃತ್ತಿಯ ಬಳಿಕ ‘ಗೋಯಿಂಗ್ ವೈರಲ್’ ಎಂಬ ಪುಸ್ತಕ ಬರೆದಿದ್ದರು. ಕರೊನಾ ಸಮಯದಲ್ಲಿ ತಾವು ಎದುರಿಸಿದ ಸವಾಲುಗಳು, ಸಮಸ್ಯೆಗಳು, ಸಾಧನೆ, ಲಸಿಕೆ ಹೇಗೆ ಮಾಡಿದರು? ಎಂಬ ಮಾಹಿತಿಗಳಿದ್ದವು. ವಿವೇಕ್ ಇದರ ಬಗ್ಗೆ ಸಿನಿಮಾ ಮಾಡಿದರೆ, ಇವತ್ತಿನ ಪೀಳಿಗೆಗೆ ನಮ್ಮ ಭಾರತದ ಸಾಧನೆಯ ಬಗ್ಗೆ ಮಾಹಿತಿ ದೊರೆಯುತ್ತದೆ ಎಂದರು. ಡಾ. ಭಾರ್ಗವ್‌ರನ್ನು ಭೇಟಿಯಾಗಿ ಚರ್ಚಿಸಿ, ಲಸಿಕೆ ತಯಾರಿಸಿದ ವಿಜ್ಞಾನಿಗಳ ಜತೆ ಅವರ ವೃತ್ತಿ ಜೀವನ, ವೈಯಕ್ತಿಕ ಜೀವನಗಳಲ್ಲಿ ಆದ ಬೆಳವಣಿಗೆಗಳು ಪ್ರತಿಯೊಂದು ಸಣ್ಣ ವಿಷಯಗಳನ್ನೂ ತಿಳಿದುಕೊಂಡೆವು.
- ಚಿತ್ರದಲ್ಲಿ ಪ್ರೇಕ್ಷಕರು ಏನನ್ನು ನಿರೀಕ್ಷಿಸಬಹುದು?
- ನಮ್ಮ ವಿಜ್ಞಾನಿಗಳ ಸಾಹಸವನ್ನು ತೆರೆಯ ಮೇಲೆ ನೋಡಿದರೆ ಖಂಡಿತವಾಗಿಯೂ ಪ್ರೇಕ್ಷಕರಿಗೆ ಆಶ್ಚರ್ಯವಾಗಲಿದೆ. ತಮ್ಮ ಕನಸಿನಲ್ಲೂ ಊಹಿಸದ ಮಟ್ಟಕ್ಕೆ ಹೋಗಿ, ಸಾಕಷ್ಟು ಅಡೆತಡೆಗಳನ್ನು ಭೇದಿಸಿ ಈ ಸಾಧನೆ ಮಾಡಿದ್ದಾರೆ. ಕೇವಲ ಏಳು ತಿಂಗಳಲ್ಲಿ ಯಾವುದೇ ಸೈಡ್ ಎೆಕ್ಟ್‌ಗಳಿಲ್ಲದ, ಎಲ್ಲ ಬಗೆಯ ಟೆಸ್ಟ್‌ಗಳಲ್ಲಿ ಪಾಸ್ ಆದ ಮೇಡ್ ಇನ್ ಇಂಡಿಯಾ ಲಸಿಕೆ ಬಂತು. ಇದು ಇತಿಹಾಸದ ಪುಟ ಸೇರುವ ಭಾರತೀಯ ವಿಜ್ಞಾನಿಗಳ ಸಾಹಸಗಾಥೆ.
- ಇತ್ತೀಚಿನ ವರ್ಷಗಳಲ್ಲಿ ವಿಷಯಾಧಾರಿತ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದೀರಿ.
- ಕಮರ್ಷಿಯಲ್ ಚಿತ್ರಗಳಲ್ಲಿನ ಪಾತ್ರಗಳು ನನಗೆ ಸವಾಲು ಅಂತನ್ನಿಸುತ್ತಿರಲಿಲ್ಲ. ಹೀಗಾಗಿ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. 1995ರಲ್ಲಿ ಶ್ಯಾಮ್ ಬೆನೆಗಲ್ ಅವರ ‘ಮೇಕಿಂಗ್ ಆ್ ಮಹಾತ್ಮ’ ಚಿತ್ರದ ಬಳಿಕ ವೈಯಕ್ತಿಕ ಜೀವನದತ್ತ ಗಮನ ಹರಿಸಿದೆ. ಆದರೆ, ಮನೆಯಲ್ಲೇ ಕುಳಿತು ನನ್ನಲ್ಲಿದ್ದ ನಟಿ ಹತಾಶೆಯಾಗುತ್ತಿದ್ದಳು. 2010ರಲ್ಲಿ ಮತ್ತೆ ನಟನೆಗೆ ಮರಳಿದೆ. ಕ್ರಮೇಣ ಕೆಲ ಮರಾಠಿ ಧಾರಾವಾಹಿಗಳನ್ನು ನಿರ್ಮಿಸಿದೆ. ‘ತಾಷ್ಕೆಂಟ್ ೈಲ್ಸ್’ ನಾನು ನಿರ್ಮಿಸಿದ ಮೊದಲ ಚಿತ್ರ.
- ಕನ್ನಡದ ‘ಭುಜಂಗಯ್ಯನ ದಶಾವತಾರ’ ಚಿತ್ರದಲ್ಲೂ ನಟಿಸಿದ್ದೀರಿ.
- ಆ ಸಿನಿಮಾ ಒಳ್ಳೆಯ ಅನುಭವ ನೀಡಿತ್ತು. ನಾನು ಕನ್ನಡ ಬೇಗನೇ ಕಲಿತಿದ್ದೆ. ಉಚ್ಛಾರಣೆ ಸಮಸ್ಯೆಯಿದ್ದರೂ, ಸೆಟ್‌ನಲ್ಲಿ ಕನ್ನಡದಲ್ಲೇ ಮಾತನಾಡಲು ಪ್ರಯತ್ನಿಸುತ್ತಿದ್ದೆ. ಲೋಕೇಶ್ ಅವರದು ಅದ್ಭುತ ವ್ಯಕ್ತಿತ್ವ. ಅಷ್ಟೇ ಅದ್ಭುತ ನಟ. ಶೂಟಿಂಗ್ ವೇಳೆ ಕೆಲವೊಮ್ಮೆ ಅವರನ್ನೇ ನೋಡುತ್ತಾ ನಿಂತುಬಿಡುತ್ತಿದ್ದೆ, ಅವರು ಈಗ ನಿಮ್ಮ ಸಾಲಿದೆ ಎಂದು ನೆನಪಿಸುತ್ತಿದ್ದರು. ಗಿರಿಜಾ ಅವರೂ ತುಂಬ ಒಳ್ಳೆಯವರು. ನಾನಾಗ 18, 19 ವರ್ಷದ ಹುಡುಗಿ. ತುಂಬ ತರಲೆ ಮಾಡುತ್ತಿದ್ದೆ. ಆದರೆ, ಪತಿ, ಪತ್ನಿ ಇಬ್ಬರೂ ಕೇರ್ ಮಾಡುತ್ತಿದ್ದರು. ಕನ್ನಡದಲ್ಲಿ ನಟಿಸುವಾಸೆ ಇದೆ. ಉತ್ತಮ ಅವಕಾಶ ಸಿಕ್ಕರೆ ನಟಿಸುತ್ತೇನೆ.
- ಸಪ್ತಮಿ ಗೌಡ ಜತೆ ನಟಿಸಿದ್ದೀರಿ…
ನಾನು, ಸಪ್ತಮಿ ಎರಡು ಸೀನ್‌ಗಳಲ್ಲಿ ತೆರೆ ಹಂಚಿಕೊಂಡಿದ್ದೇವೆ. ಆ್ಯಕ್ಟಿಂಗ್ ಅನ್ನು ಗಂಭೀರವಾಗಿ ತೆಗೆದುಕೊಂಡಿರುವ ಹುಡುಗಿ. ಸುಮ್ಮನೇ ನಟಿಸಬೇಕು ಅಂತ ನಟಿಸುವುದಿಲ್ಲ. ಬಹುತೇಕ ಸನ್ನಿವೇಶಗಳಲ್ಲಿ ಮಾಸ್ಕ್ ಧರಿಸಿರುತ್ತಾರೆ. ಹೀಗಾಗಿ ಕಣ್ಣಿನ ಮೂಲಕ ತಮ್ಮ ಎಮೋಷನ್ಸ್ ತೋರಿಸಬೇಕು. ವಿವೇಕ್ ಜತೆ ಕುಳಿತು ಪ್ರತಿ ಸನ್ನಿವೇಶ, ಡೈಲಾಗ್‌ನ ಪ್ರತಿ ಸಾಲಿನ ಬಗ್ಗೆ ಚರ್ಚಿಸುತ್ತಿದ್ದರು.
- ಪತಿ ವಿವೇಕ್ ಅಗ್ನಿಹೋತ್ರಿಗೆ ಜೀವಬೆದರಿಕೆಯಿದೆ. ಈಗಲೂ ಪೊಲೀಸ್ ರಕ್ಷಣೆಯಲ್ಲಿದ್ದಾರೆ…
- ಕೆಲವೊಮ್ಮೆ ನಾವು ಸಾಗುವ ದಾರಿಯಲ್ಲಿ ಹಲವು ಸಂಕಷ್ಟಗಳು ಎದುರಾಗುತ್ತವೆ. ದಾರಿ ತಪ್ಪಿಸುವವರು, ಕಾಲೆಳೆಯುವವರು ತುಂಬ ಇರುತ್ತಾರೆ. ಆದರೆ, ನಾನು ಮತ್ತು ಮಕ್ಕಳು, ನೀವು ಮುನ್ನುಗ್ಗಿ, ನಿಮ್ಮ ಜತೆ ನಾವಿರುತ್ತೇವೆ ಎಂದೆವು. ನಮ್ಮ ಮಕ್ಕಳು ನಮಗೆ ಶಕ್ತಿ ತುಂಬಿದ್ದಾರೆ. ಸುತ್ತ ನಡೆಯುವ ಘಟನೆಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಅಂತಲ್ಲ. ಆದರೆ, ಹಾಗಾಗದಂತೆ ನೋಡಿಕೊಳ್ಳಬೇಕು. ಇದುವರೆಗೂ ಏನಾಗಿದೆ? ಮುಂದೆ ಏನಾಗಲಿದೆ? ಎಂಬುದರ ಬಗ್ಗೆ ನಮಗೂ ಗೊತ್ತು. ಆದರೆ, ಇನ್ನೂ ಎಷ್ಟು ದೂರ ಸಾಗಲು ಸಾಧ್ಯವೋ ನೋಡಬೇಕಿದೆ…