ಸಿನಿವಾಣಿ

'ದಿ ಫ್ಯಾಮಿಲಿ ಮ್ಯಾನ್​ 3' ಯಾವಾಗ ಬರುತ್ತೆ? ಇಲ್ಲಿದೆ ಉತ್ತರ

ಮುಂಬೈ: ಮನೋಜ್​ ಬಾಜ್ಪೇಯಿ ಅಭಿನಯದ 'ದಿ ಫ್ಯಾಮಿಲಿ ಮ್ಯಾನ್​ 2' ಕಳೆದ ವಾರವಷ್ಟೇ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಈಗಾಗಲೇ 'ದಿ ಫ್ಯಾಮಿಲಿ ಮ್ಯಾನ್​ 3' ಯಾವಾಗ ಬರುತ್ತದೆ ಎಂಬ ಚರ್ಚೆ ಶುರುವಾಗಿದೆ.

'ದಿ ಫ್ಯಾಮಿಲಿ ಮ್ಯಾನ್​ 2' ಕ್ಲೈಮ್ಯಾಕ್ಸ್​ನಲ್ಲಿ, ಕಥೆ ಅಷ್ಟಕ್ಕೇ ಮುಗಿಯುವುದಿಲ್ಲ, ಇನ್ನೂ ಮುಂದುವರೆಯಲಿದೆ ಎಂಬ ಹಿಂಟ್​ ನೀಡಲಾಗಿದೆ. ಇದನ್ನು ನೋಡಿದಾಗಿನಿಂದ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದ್ದು, ಮೂರನೇ ಸೀಸನ್​ನ ಚಿತ್ರೀಕರಣ ಯಾವಾಗಿನಿಂದ ಶುರುವಾಗಬಹುದು, ಆ ಕಾರ್ಯಕ್ರಮ ಯಾವಾಗ ಅಮೇಜಾನ್​ ಪ್ರೈಮ್​ನಲ್ಲಿ ಸ್ಟ್ರೀಮ್​ ಆಗಬಹುದು ಎಂಬ ಲೆಕ್ಕಾಚಾರ ಪ್ರಾರಂಭವಾಗಿದೆ.

ಈ ಕುರಿತು ಸ್ವತಃ ಮನೋಜ್​ ಬಾಜ್ಪೇಯಿ ಮಾತನಾಡಿದ್ದು, ಕಾರ್ಯಕ್ರಮ ಯಾವಾಗ ಬರಬಹುದು ಎಂದು ಸೂಚ್ಯವಾಗಿ ಹೇಳಿದ್ದಾರೆ. 'ಲಾಕ್​ಡೌನ್​ನಿಂದ ಎಲ್ಲರೂ ಲಾಕ್​ ಆಗಿದ್ದಾರೆ. ಮೊದಲು ಜಗತ್ತು ತೆರೆದುಕೊಳ್ಳಿ. ಕೆಲಸಗಳು ಪ್ರಾರಂಭವಾಗಲಿ. ಆ ನಂತರ, ಖಂಡಿತಾ ನಿರ್ದೇಶಕರು ಅಮೇಜಾನ್​ ಜತೆಗೆ ಮಾತು ಮುಂದುವರೆಸಲಿದ್ದಾರೆ. ಈಗಾಗಲೇ ಕಥೆ ರೆಡಿಯಾಗಿದ್ದು, ಅಮೇಜಾನ್​ನವರಿಂದ ಗ್ರೀನ್​ ಸಿಗ್ನಲ್​ ಸಿಗುತ್ತಿದ್ದಂತೆಯೇ ಕೆಲಸಗಳು ಶುರುವಾಗಲಿದೆ' ಎನ್ನುತ್ತಾರೆ ಮನೋಜ್​.

ಇದೆಲ್ಲ ಎಷ್ಟು ಸಮಯವಾಗಬಹುದು ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟಾಗ, 'ಈಗಾಗಲೇ ಕಥೆ ರೆಡಿ ಇದೆ. ಚಿತ್ರಕಥೆ ಸಹ ಇನ್ನು ಕೆಲವು ದಿನಗಳಲ್ಲಿ ಮುಗಿಯಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಇನ್ನೊಂದೂವರೆ ವರ್ಷಗಳಲ್ಲಿ ಮೂರನೇ ಸೀಸನ್​ ಬರುವ ಸಾಧ್ಯತೆ ಇದೆ. ಈಗಲೇ ನಿಖರವಾಗಿ ಹೇಳುವುದು ಕಷ್ಟ' ಎಂದು ಹೇಳಿಕೊಂಡಿದ್ದಾರೆ. ಅಲ್ಲಿಗೆ, 2022ರ ಕೊನೆ ಅಥವಾ 2023ರವರೆಗೂ 'ದಿ ಫ್ಯಾಮಿಲಿ ಮ್ಯಾನ್​ 3'ಗಾಗಿ ಕಾಯಬೇಕಾಗಿ ಬಂದರೆ, ಅದರಲ್ಲಿ ಆಶ್ಚರ್ಯವಿಲ್ಲ.