ಸಂದರ್ಶನವೊಂದರಲ್ಲಿ ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿರುವ ಹಿರಿಯ ನಟಿ ರಮ್ಯಾ ಕೃಷ್ಣನ್ 
ಸಿನಿವಾಣಿ

ಕಾಸ್ಟಿಂಗ್ ಕೌಚ್‌ಗೆ ಲಿಂಗ ಬೇಧವಿಲ್ಲ, ಇದು ಎಂದಿಗೂ ನಿಲ್ಲದ ಪ್ರಕ್ರಿಯೆ: ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ರಮ್ಯಾ ಕೃಷ್ಣನ್! Ramya Krishnan

ಚೆನ್ನೈ: "ಕಾಸ್ಟಿಂಗ್​ ಕೌಚ್​" ಇದು ಸಿನಿಮಾ ಕ್ಷೇತ್ರಕ್ಕೆ ಅಂಟಿರುವ ಕಪ್ಪು ಚುಕ್ಕೆ ಎನ್ನುವುದಕ್ಕಿಂತ, ಮೆತ್ತಿರುವ ಕಪ್ಪು ಮಸಿ ಎನ್ನುವುದೇ ಸೂಕ್ತ. ಸಿನಿಮಾದಲ್ಲಿ ಅವಕಾಶ ಪಡೆಯಲು ಪಲ್ಲಂಗಕ್ಕೇರುವ ಈ ಪದ್ಧತಿ, ತೀರಾ ವಿಕೃತವಾದದ್ದು ಎನ್ನಬಹುದು.

ಕಾಲಕಾಲಕ್ಕೆ ಈ ಕಾಸ್ಟಿಂಗ್​ ಕೌಚ್ ಬಗ್ಗೆ ಸಿನಿಮಾ ಕ್ಷೇತ್ರದವರು ತಮ್ಮ ಆಕ್ರೋಶ ಹಾಗೂ ಅಸಹಾಯಕತೆಯನ್ನು ಹೊರಹಾಕುತ್ತಾ ಬಂದಿದ್ದಾರೆ. ಈಗ ಇದರ ಬಗ್ಗೆ ಸಿನಿಮಾ ರಂಗದ ಹಿರಿಯ ನಟಿ ರಮ್ಯಾ ಕೃಷ್ಣನ್​ ಮುಕ್ತವಾಗಿ ಮಾತನಾಡಿದ್ದಾರೆ. ​

ಕಾಸ್ಟಿಂಗ್​ ಕೌಚ್​ಗೆ ಲಿಂಗ ಬೇಧವಿಲ್ಲ!

ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹಿರಿಯ ನಟಿ ಈ ಬಗ್ಗೆ ಕಾಸ್ಟಿಂಗ್​ ಕೌಚ್​​ ಬಗ್ಗೆ ತಮಗಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಾವು ಕಾಸ್ಟಿಂಗ್​ ಕೌಚ್​ ಎಂದರೆ, ಈ ಜಾಲಕ್ಕೆ ಕೇವಲ ಹೆಣ್ಣು ಮಕ್ಕಳು ಅಥವಾ ಮಹಿಳಾ ಪಾತ್ರಧಾರಿಗಳು ಮಾತ್ರ ಸಿಲುಕಿಕೊಳ್ಳುತ್ತಾರೆಂದು ತಿಳಿದಿದ್ದೇವೆ. ಆದರೆ, ಈ ಕಾಸ್ಟಿಂಗ್​ ಕೌಚ್​ಗೆ ಯಾವುದೇ ಲಿಂಗ ಬೇಧವಿಲ್ಲ. ಇಲ್ಲಿ ಮಹಿಳೆಯರಷ್ಟೇ ಪುರುಷರು ಕೂಡ ಕಷ್ಟ ಅನುಭವಿಸುತ್ತಾರೆ. ಆದರೆ ಅದರ ಬಗ್ಗೆ ಹೆಚ್ಚಾಗಿ ಸುದ್ದಿಯಾಗುವುದಿಲ್ಲ ಎಂದಿದ್ದಾರೆ.

ಇದು ಎಂದಿಗೂ ನಿಲ್ಲದ ಪ್ರಕ್ರಿಯೆ!

ಹಾಗೆಯೇ, ಈ ಕಾಸ್ಟಿಂಗ್​ ಕೌಚ್​​ ನಿನ್ನೆ ಮೊನ್ನೆಯಿಂದ ನಡೆಯುತ್ತಿದೆ. ಇದು ಸಿನಿಮಾದ ಆರಂಭದ ದಿನಗಳಿಂದಲೇ ನಡೆದುಕೊಂಡು ಬಂದಿದೆ. ಹೀಗಾಗಿ ಈ ಮೊದಲು ನಿಂತಿರಲಿಲ್ಲ, ಈಗಲೂ ನಿಂತಿಲ್ಲ, ಮುಂದೇಯೂ ನಿಲ್ಲಲ್ಲ ಎಂದು ಖಡಾಖಂಡಿತವಾಗಿ ರಮ್ಯಾ ಹೇಳಿದ್ದಾರೆ.

ನಮ್ಮ ಈ ಸಿನಿಲೋಕ ಒಂದು ಗ್ಲಾಮರಸ್​ ಲೋಕವಾಗಿದೆ ಹೀಗಾಗಿ ಈ ಪದ್ಧತಿ ನಡೆದುಕೊಂಡೇ ಬಂದಿದೆ. ಈ ಕಾಸ್ಟಿಂಗ್​ ಕೌಚ್​ ಬಲವಂತ, ಅನಿವಾರ್ಯ ಅಥವಾ ಸಮ್ಮತಿಯ ಮೆರೆಗೆ, ಒಟ್ಟಿನಲ್ಲಿ ಯಾವುದಾದರೂ ಒಂದು ಸ್ವರೂಪದಲ್ಲಿ ನಡೆದೇ ನಡೆಯುತ್ತಿದೆ. ಇದು ಚಿತ್ರರಂಗದ ಕರಾಳ ಸತ್ಯವಾಗಿದೆ ಎಂದಿದ್ದಾರೆ.

ಹಾಗೆಯೇ ಈ ಕಾಸ್ಟಿಂಗ್​ ಕೌಚ್​ ಎನ್ನುವುದು ಕೇವಲ ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಇದರ ಹೊರತಾಗಿಯೂ ಬೇರೆಡೆ ನಡೆಯುತ್ತದೆ. ಆದರೆ ಅದು ಹೆಚ್ಚಾಗಿ ಸದ್ದನ್ನು ಮಾಡುವುದಿಲ್ಲ ಎಂದು ಹಿರಿಯ ನಟಿ ಹೇಳಿದ್ದಾರೆ.

ಮೂಲಭೂತ ಸೌಕರ್ಯಗಳು ಇರಲಿಲ್ಲ!

ಇನ್ನು ಈ ಕಾಸ್ಟಿಂಗ್​ ಕೌಚ್​ಗೆ ಹೆಚ್ಚು ಬಲಿಯಾದವರೂ ಹೆಣ್ಣುಮಕ್ಕಳೇ ಆಗಿದ್ದಾರೆ. ಅದರೆ ತಾನು ನಟಿಸುವ ಕಾಲದಲ್ಲಿ ಈ ಕಾಸ್ಟಿಂಗ್​ ಕೌಚ್​ ಎಷ್ಟಿತ್ತೋ ಅದೇ ರೀತಿ ನಮಗೆ ಮೂಲಭೂತ ಸೌಕರ್ಯಗಳ ಕೊರತೆ ಕೂಡ ಅಷ್ಟೇ ಇತ್ತು. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಕೂಡ ಇರುತ್ತಿರಲಿಲ್ಲ. ಕೆಲವೊಮ್ಮೆ ಕಾರಿನ ಒಳಗೇ, ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಕೂಡ ಮಾಡಿದ್ದೇವೆ.

ಬಟ್ಟೆ ಬಲಿಸಿಕೊಳ್ಳಲು ಈಗೀನ ರೀತಿ ಕ್ಯಾರವನ್ ವ್ಯವಸ್ಥೆ ಎಲ್ಲಾ ತುಂಬಾ ದೂರದ ಮಾತಾಯಿತಿ. ಮರದ ಹಿಂದೆ, ಅಥವಾ ಪೊದೆಗಳಲ್ಲಿ ಕುಳಿತು ಬಟ್ಟೆ ಬದಲಿಸಿಕೊಂಡು ಬಂದು ಎಷ್ಟೋ ಸಿನಿಮಾಗಳಲ್ಲಿ ಅಭಿನಯಿಸಿದ್ದಾಗಿ ಹಿರಿಯ ನಟಿ ಅಂದಿನ ಕಷ್ಟಕರ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಂದಿನ ಪರಿಸ್ಥಿತಿಗೆ ಹೋಲಿಸಿದರೆ, ಇಂದು ಸಿನಿಮಾ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ಕಂಡು ಬಂದಿದೆ. ನಾವು ಅಂದು ಅನುಭವಿಸಿದ ಕಷ್ಟಗಳ ಕಾಲು ಭಾಗವನ್ನು ಈಗೀನ ನಟಿಯರು ಅನುಭವಿಸಿಲ್ಲ ಎಂದು ರಮ್ಯಾ ಕೃಷ್ಣನ್​ ಹೇಳಿದ್ದಾರೆ, (ಏಜೆನ್ಸೀಸ್​).