ಶಂಕರ್ ನಿರ್ದೇಶನದ ‘ಇಂಡಿಯನ್ 2’ ಸಿನಿಮಾಕ್ಕೆ ಒಂದಾದ ಮೇಲೊಂದು ವಿಘ್ನಗಳು ಎದುರಾಗುತ್ತಲೇ ಇವೆ. ಕಳೆದ ವರ್ಷ ಶೂಟಿಂಗ್ ಸೆಟ್ನಲ್ಲಿ ದುರಂತ ಸಂಭವಿಸಿ ಮೂವರು ಯುವಕರು ಸಾವನ್ನಪ್ಪಿದ್ದರು. ಅದಾದ ಬಳಿಕ, ಕೋವಿಡ್ ಹಿನ್ನೆಲೆಯಲ್ಲಿ ಚಿತ್ರೀಕರಣವೇ ಸ್ಥಗಿತಗೊಂಡಿತು. ಆ ನಂತರ ನಿರ್ವಪಕರು ಮತ್ತು ನಿರ್ದೇಶಕರ ನಡುವೆ ಸಮಸ್ಯೆ ಎದುರಾಗಿ, ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಈ ಪ್ರಕರಣ ಬಹುತೇಕ ಬಗೆಹರಿದಿದ್ದು, ಮುಂದಿನ ವರ್ಷದಿಂದ ಚಿತ್ರೀಕರಣ ಪುನಃ ಶುರುವಾಗಲಿದೆ ಎನ್ನುತ್ತಿರುವಾಗಲೇ, ಅಚ್ಚರಿ ಬೆಳವಣಿಗೆಯೊಂದರಲ್ಲಿ ಚಿತ್ರದ ನಾಯಕಿಯೇ ಬದಲಾಗಿದ್ದಾರೆ!
ಹೌದು, ಕಮಲ್ ಹಾಸನ್ ನಟಿಸಲಿರುವ ‘ಇಂಡಿಯನ್ 2’ ಚಿತ್ರಕ್ಕೆ ಕಾಜಲ್ ಅಗರ್ವಾಲ್ ನಾಯಕಿ ಎಂಬುದು ಗೊತ್ತಿರುವ ವಿಚಾರ. ಈ ಹಿಂದೆ ನಡೆದ ಶೂಟಿಂಗ್ನಲ್ಲಿಯೂ ಅವರು ಭಾಗವಹಿಸಿದ್ದರು. ಇದೀಗ ಗರ್ಭಿಣಿ ಅನ್ನೋ ಕಾರಣಕ್ಕೆ ಚಿತ್ರದಿಂದ ಕಾಜಲ್ ಹಿಂದೆ ಸರಿದಿದ್ದಾರಂತೆ. ಹಾಗಾದರೆ, ಚಿತ್ರಕ್ಕೆ ನಾಯಕಿ ಯಾರು? ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕಮಲ್ಗೆ ನಾಯಕಿಯಾಗಲಿದ್ದಾರಂತೆ. ಈ ವಿಚಾರವನ್ನು ಚಿತ್ರತಂಡ ಇನ್ನಷ್ಟೇ ಬಹಿರಂಗಪಡಿಸಬೇಕಿದೆ.
ಇತ್ತ ನಿರ್ದೇಶಕ ಶಂಕರ್, ರಾಮ್ರಣ್ ತೇಜ ಅಭಿನಯದ ಚಿತ್ರದ ನಿರ್ದೇಶನದಲ್ಲಿ ಬಿಜಿಯಾಗಿದ್ದಾರೆ. ಇದು ಮುಗಿದ ನಂತರ, ಬಹು ನಿರೀಕ್ಷಿತ ‘ಇಂಡಿಯನ್ 2’ ಚಿತ್ರದತ್ತ ಚಿತ್ತ ಹರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ವಿುಸುತ್ತಿದೆ. -ಏಜೆನ್ಸೀಸ್