ಲಾಕ್ಡೌನ್ಗೂ ಮುಂಚೆಯೇ ವಿನಯ್ ರಾಜಕುಮಾರ್ ಅಭಿನಯದ ಟೆನ್ ಚಿತ್ರದ ಚಿತ್ರೀಕರಣ ಮುಗಿದಿತ್ತು. ಲಾಕ್ಡೌನ್ ಇಲ್ಲದಿದ್ದರೆ, ಬಹುಶಃ ಇಷ್ಟು ಹೊತ್ತಿಗೆ ಚಿತ್ರ ಬಿಡುಗಡೆಯಾಗಿರುತ್ತಿತ್ತೋ ಏನೋ? ಆದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ನಿಂತಿದ್ದರಿಂದ, ಇದೀಗ ಚಿತ್ರದ ಕೆಲಸಗಳೂ ನಿಧಾನವಾಗಿವೆ.
ಈ ಮಧ್ಯೆ ಇಂದು ಬೆಳಿಗ್ಗೆ ಟೆನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಒಂದು ನಿಮಿಷ ಅವಧಿಯ ಈ ಟೀಸರ್, ಯೂಟ್ಯೂಬ್ನ ಪುಷ್ಕರ್ ಫಿಲಂಸ್ನ ಚಾನಲ್ನಲ್ಲಿ ಬಿಡುಗಡೆಯಾಗಿ, ಜನರಿಂದ ಮೆಚ್ಚುಗೆ ಪಡೆದಿದೆ. ಪ್ರಮುಖವಾಗಿ ಈ ಚಿತ್ರದಲ್ಲಿನ ವಿನಯ್ ರೂಪಾಂತರದ ಬಗ್ಗೆ ಜನ ಮಾತಾಡುತ್ತಿದ್ದಾರೆ. ಇನ್ನೂ ಕೆಲವರು, ವಿನಯ್ ರಾಜಕುಮಾರ್ ಇತ್ತೀಚಿನ ದಿನಗಳಲ್ಲಿ ವಿಭಿನ್ನವಾದ ಸ್ಕ್ರಿಪ್ಟ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದು, ಸ್ಕ್ರಿಪ್ಟ್ ವಿಚಾರದಲ್ಲಿ ಅವರನ್ನು ನೋಡಿ ಕಲಿಯಬೇಕು ಎಂದಿದ್ದಾರೆ.
ಟೆನ್ ಚಿತ್ರದಲ್ಲಿ ವಿನಯ್ ರಾಜಕುಮಾರ್ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಅವರ ಕೋಚ್ ಆಗಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಇದಲ್ಲದೆ ಅನೂಷಾ ರಂಗನಾಥ್, ಸವೀನ್ ಹೆಗ್ಡೆ, ಶ್ರೀವತ್ಸ ಶರ್ಮಾ, ಭರತ್ ಮುಂತಾದವರು ನಟಿಸಿದ್ದಾರೆ.
ಈ ಹಿಂದೆ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ ಮುಂತಾದ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಕರಮ್ ಚಾವ್ಲಾ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸಿದರೆ, ಗಗನ್ ಬಡೇರಿಯಾ ಅವರ ಸಂಗೀತ ಈ ಚಿತ್ರಕ್ಕಿದೆ.