ಸಿನಿವಾಣಿ

ಅರುಂಧತಿ ಹಿಂದಿ ರಿಮೇಕ್​ನಲ್ಲಿ ದೀಪಿಕಾ ಪಡುಕೋಣೆ ನಾಯಕಿ!

ಟಾಲಿವುಡ್​ ಸಿನಿಮಾಗಳನ್ನು ಬಾಲಿವುಡ್​ನಲ್ಲಿ ರಿಮೇಕ್​ ಮಾಡುತ್ತಿರುವುದು ಹೊಸತೇನಲ್ಲ. ದಶಕಗಳಿಂದ ಅದು ಚಾಲ್ತಿಯಲ್ಲಿದೆ. ಹಿಟ್ ಪಟ್ಟಿ ಸೇರಿದ ಸಿನಿಮಾಗಳಿಗೇನು ಕಮ್ಮಿ ಇಲ್ಲ. ಇತ್ತೀಚಿನ ಉದಾಹರಣೆ ಕೊಡುವುದಾದರೆ, ತೆಲುಗಿನ ಅರ್ಜುನ್​ ರೆಡ್ಡಿ ಹಿಂದಿಯಲ್ಲಿ ಕಬೀರ್​ ಸಿಂಗ್​ ಆಗಿ ತೆರೆಕಂಡು ಕಳೆದ ವರ್ಷದ ಸೂಪರ್​ ಹಿಟ್​ ಸಿನಿಮಾ ಆಗಿ ಹೊರಹೊಮ್ಮಿತು. ಇದೀಗ ಅಂಥದ್ದೆ ಮತ್ತೊಂದು ಪ್ರಯತ್ನಕ್ಕೆ ಟಾಲಿವುಡ್​ ನಿರ್ಮಾಪಕರು ಮುಂದಾಗಿದ್ದಾರೆ.

ಹೌದು, 2009ರಲ್ಲಿ ಅನುಷ್ಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದ ಅರುಂಧತಿ ಟಾಲಿವುಡ್​ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದ ಸಿನಿಮಾ. ಆ ಚಿತ್ರವನ್ನೇ ಇದೀಗ ಬಾಲಿವುಡ್​ನಲ್ಲಿ ನಿರ್ಮಿಸಲು ನಿರ್ಮಾಪಕರು ಯೋಜನೆ ಸಿದ್ದಪಡಿಸಿದ್ದಾರೆ. ಮೂಲ ಸಿನಿಮಾದಲ್ಲಿ ಅನುಷ್ಕಾ ಮಾಡಿದ್ದ ಪಾತ್ರವನ್ನು ದೀಪಿಕಾ ಅವರ ಕಡೆಯಿಂದ ಮಾಡಿಸುವುದು ನಿರ್ಮಾಪಕರ ಉದ್ದೇಶ.

ಈ ಹಿಂದೆ ಗಜನಿ ಚಿತ್ರವನ್ನು ಬಾಲಿವುಡ್​ನಲ್ಲಿ ರಿಮೇಕ್​ ಮಾಡಿದ್ದ ಅಲ್ಲು ಅರವಿಂದ್​, ಅರುಂಧತಿಯನ್ನೂ ಹಿಂದಿಯಲ್ಲಿ ತೆರೆಮೇಲೆ ತರಬೇಕೆಂಬ ಇಚ್ಛೆ ಹೊಂದಿದ್ದಾರೆ. ಅಲ್ಲು ಅರವಿಂದ ಅವರ ಗೀತಾ ಆರ್ಟ್ಸ್ ಬ್ಯಾನರ್ ಮತ್ತು ಮಧು ಮಂತೆನಾ ಜಂಟಿಯಾಗಿ ಈ ಸಿನಿಮಾ ಮಾಡಲಿದ್ದಾರೆ. ಈಗಾಗಲೇ ಈ ಸಿನಿಮಾ ದೀಪಿಕಾ ಅವರನ್ನು ಅಪ್ರೋಚ್​ ಮಾಡಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಲಿದೆ.

ಮೂಲ ಸಿನಿಮಾವನ್ನು ಕೋಡಿ ರಾಮಕೃಷ್ಣ ನಿರ್ದೇಶನ ಮಾಡಿದ್ದರು. ಬಾಲಿವುಡ್​ನಲ್ಲಿ ನಿರ್ದೇಶಕರು ಯಾರು ಎಂಬುದು ಸದ್ಯದ ಕುತೂಹಲ. ಅಂದಹಾಗೆ, ಇತ್ತೀಚೆಗಷ್ಟೇ ಪ್ರಭಾಸ್​ ಸಿನಿಮಾ ನಾಯಕಿಯಾಗಿ ಕಾಣಿಸಿಕೊಂಡಿರುವ ದೀಪಿಕಾ, ಟಾಲಿವುಡ್​ ಅಂಗಳಕ್ಕೆ ಕಾಲಿರಿಸಿದ್ದಾರೆ. (ಏಜೆನ್ಸೀಸ್​)