ಸಿನಿವಾಣಿ

ಶೂಟಿಂಗ್​ ಶುರು ಮಾಡ್ಕೊಳ್ಳಿ ... ತೆಲಂಗಾಣ ಸರ್ಕಾರದ ಗ್ರೀನ್​ ಸಿಗ್ನಲ್​

ಲಾಕ್​ಡೌನ್​ನಿಂದ ಇಡೀ ದೇಶದಲ್ಲಿ ಚಿತ್ರೀಕರಣ ಚಟುವಟಿಕೆಗಳು ನಿಂತು ಎರಡೂವರೆ ತಿಂಗಳುಗಳಾಗಿವೆ. ಈ ಮಧ್ಯೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳನ್ನು ಮತ್ತು ಧಾರಾವಾಹಿ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಕರ್ನಾಟಕ ಸರ್ಕಾರ ಸೇರಿದಂತೆ ಕೆಲವು ಸರ್ಕಾರಗಳು ಅನುಮತಿ ಕೊಟ್ಟಿತ್ತು. ಆದರೆ, ಚಿತ್ರೀಕರಣ ಮತ್ತು ಚಿತ್ರಪ್ರದರ್ಶನಕ್ಕೆ ಇಡೀ ದೇಶದಲ್ಲಿ ಎಲ್ಲೂ ಅವಕಾಶವಿರಲಿಲ್ಲ.

ಇದೀಗ ಲಾಕ್​ಡೌನ್​ ತೆರವಾಗಿದ್ದು, ಚಿತ್ರೀಕರಣ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂದು ಎಲ್ಲಾ ಚಿತ್ರರಂಗಗಳು ಮನವಿ ಮಾಡುತ್ತಿದೆ. ಇತ್ತೀಚೆಗೆ ಚಿರಂಜೀವಿ ನೇತೃತ್ವದ ತೆಲುಗು ಚಿತ್ರರಂಗದ ನಿಯೋಗವೊಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಅವರನ್ನು ಭೇಟಿ ಮಾಡಿ, ಚಿತ್ರೀಕರಣ ಮಾಡುವುದಕ್ಕೆ ಮನವಿ ಮಾಡಿತ್ತು. ಅದಕ್ಕೆ ಸ್ಪಂದಿಸಿರುವ ತೆಲಂಗಾಣದ ಕೆಸಿಆರ್​ ಸರ್ಕಾರವು, ತಕ್ಷಣದಿಂದ ಚಿತ್ರೀಕರಣ ಚಟುವಟಿಕೆಗಳನ್ನು ಪ್ರಾರಂಭಿಸುವುದಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದೆ.

ಹೌದು, ತೆಲಂಗಾಣದಲ್ಲಿ ಚಲನಚಿತ್ರ ಮತ್ತು ಧಾರಾವಾಹಿಗಳ ಚಿತ್ರೀಕರಣಕ್ಕೆ ಮುಖ್ಯಮಂತ್ರಿ ಕೆಸಿಆರ್​ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಆದರೆ, ಸುಮ್ಮನೆ ಚಿತ್ರೀಕರಣ ಮಾಡುವಂತಿಲ್ಲ. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಬಹುದಾಗಿದೆ. ಹಾಗೆಯೇ ಚಿತ್ರೀಕರಣಕ್ಕೆ ರಾಜ್ಯ ಬಿಟ್ಟು ಹೋಗುವಂತಿಲ್ಲ. ರಾಜ್ಯದಲ್ಲೇ ಅಗತ್ಯವಿರುವ ದೃಶ್ಯಗಳನ್ನು ಚಿತ್ರೀಕರಣ ಮಾಡಬಹುದು ಎಂದು ಹೇಳಲಾಗಿದೆ. ಇನ್ನು ಚಿತ್ರೀಕರಣ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆಯಾದರೂ, ಚಿತ್ರಪ್ರದರ್ಶನಕ್ಕೆ ಅನುಮತಿ ನೀಡಲಾಗಿಲ್ಲ.

ಈ ಮಧ್ಯೆ ಬಾಲಿವುಡ್​ನಲ್ಲಿ ಚಿತ್ರೀಕರಣ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂಬ ಒತ್ತಾಯ ಕೇಳಿ ಬಂದಿದ್ದು, ಅದಕ್ಕೆ ಪ್ರತಿಯಾಗಿ ‘ರಾಧೆ; ಯುವರ್​ ಮೂಸ್ಟ್ ವಾಂಟೆಡ್ ಭಾಯಿ’ ಚಿತ್ರದ ಚಿತ್ರೀಕರಣ ಮಾಡಿಕೊಳ್ಳಲು ಚಿತ್ರತಂಡ ಸಿದ್ಧತೆ ನಡೆಸಿದ್ದು, ಇನ್ನು ಕೆಲದಿನಗಳಲ್ಲಿ ಸಲ್ಮಾನ್​ ಸೆಟ್​ಗೆ ಆಗಮಿಸಲಿದ್ದಾರೆ.