ತಮ್ಮ ನಟನೆಯಿಂದ ಸಿನಿಪ್ರಿಯರ ಹೃದಯ ಕದ್ದಿರುವ ಸೌತ್ ನಟಿ ತಮನ್ನಾ ಭಾಟಿಯಾ ಅಂದರೆ ಮಿಲ್ಕಿ ಬ್ಯೂಟಿ ಅವರು ಅತ್ಯುತ್ತಮ ಡ್ಯಾನ್ಸರ್ ಎನ್ನುವುದರಲ್ಲಿ ತಪ್ಪಿಲ್ಲ. ಬಹಳಷ್ಟು ಚಿತ್ರಗಳಲ್ಲಿ ಅವರು ಐಟಂ ಹಾಡುಗಳಲ್ಲಿಯೂ ಹೆಜ್ಜೆ ಹಾಕಿ ಎಲ್ಲರನ್ನು ರಂಜಿಸಿದ್ದಾರೆ. ಕನ್ನಡದ ‘ಕೆಜಿಎಫ್: ಚಾಪ್ಟರ್ 1’ ಚಿತ್ರದಲ್ಲಿನ ‘ಜೋಕೆ... ನಾನು ಬಳ್ಳಿಯ ಮಿಂಚು’ ಹಾಡಿಗೆ ತಮನ್ನಾ ಅವರು ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.
ಇದೀಗ, ನಟಿ ತಮನ್ನಾ ‘ಗನಿ’ ಚಿತ್ರದಲ್ಲಿ ಐಟಂ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಅಂದಹಾಗೆ, ಸಾಮಾಜಿಕ ಜಾಲತಾಣದಲ್ಲಿ ನಟಿಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ಸಿನಿಮಾದಲ್ಲಿ ತೆಲುಗಿನ ಮೆಗಾ ಕುಟುಂಬದ ವರುಣ್ ತೇಜ್ ಅವರು ನಾಯಕ ನಟ. ಇನ್ನು, ನಟ ಜಗಪತಿ ಬಾಬು ಮತ್ತು ಸಾಯಿ ಮಂಜ್ರೇಕರ್ ಅವರು ಬೇರೆ ಬೇರೆ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ‘ಕೋಡ್ತೆ’ ಎಂಬ ಐಟಂ ಹಾಡಿಗೆ ತಮನ್ನಾ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.
‘ಗನಿ’ ಚಿತ್ರದಲ್ಲಿನ ‘ಕೋಡ್ತೆ’ ಹಾಡಿನ ಲಿರಿಕಲ್ ವಿಡಿಯೋದಲ್ಲಿ ತಮನ್ನಾ ಹೆಜ್ಜೆ ಹಾಕಿರುವುದು ಕಂಡುಬಂದಿದ್ದು, ತಮ್ಮ ರೀತಿಯೇ ಡ್ಯಾನ್ಸ್ ಮಾಡಿ ತೋರಿಸುವಂತೆ ಚಿತ್ರದ ನಟ ವರುಣ್ ತೇಜ್, ನಟಿ ಸಾಯಿ ಮಂಜ್ರೇಕರ್ಗೆ ತಮನ್ನಾ #KodtheDanceChallenge ಹಾಕಿದ್ದಾರೆ. ಈಗ ತಮನ್ನಾ ಬಳಸಿರುವ ಈ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ‘ಗನಿ’ ಸಿನಿಮಾಗೆ ತಮನ್.ಎಸ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.