ಸಿನಿವಾಣಿ

'ಮಾಸ್ಟರ್​' ಚಿತ್ರದ ತುಣುಕುಗಳನ್ನು ಲೀಕ್​ ಮಾಡಿದ್ದು ಯಾರು ಅಂತ ಕೊನೆಗೂ ಗೊತ್ತಾಯ್ತು

ಚೆನ್ನೈ: ವಿಜಯ್​ ಮತ್ತು ವಿಜಯ್​ ಸೇತುಪತಿ ಮೊದಲ ಬಾರಿಗೆ ಜತೆಯಾಗಿ ನಟಿಸಿದ 'ಮಾಸ್ಟರ್​' ಚಿತ್ರವು ನಾಳೆ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ವಿಜಯ್​ ಅಭಿಮಾನಿಗಳು ಚಿತ್ರದ ಬಗ್ಗೆ ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ಮಧ್ಯೆ, ಚಿತ್ರದ ಒಂದಿಷ್ಟು ತುಣುಕುಗಳು ಇಂತು ಇಂಟರ್​ನೆಟ್​ನಲ್ಲಿ ಪತ್ತೆಯಾಗಿದೆ.

ಹೌದು, ಮಂಗಳವಾರ ಬೆಳಿಗ್ಗೆ 'ಮಾಸ್ಟರ್​' ಚಿತ್ರದ ತುಣುಕುಗಳು ಬಿಡುಗಡೆಯಾಗಿದ್ದು, ಚಿತ್ರತಂಡದವರಷ್ಟೇ ಅಲ್ಲ, ಇಡೀ ಚಿತ್ರರಂಗವೇ ಇದರಿಂದ ಶಾಕ್​ ಆಗಿದೆ. ಯಾವಾಗ ಚಿತ್ರದ ತುಣುಕುಗಳು ಲೀಕ್​ ಆಗಿದ್ದು ಗೊತ್ತಾಯಿತೋ, ಖುದ್ದು ನಿರ್ದೇಶಕ ಲೋಕೇಶ್​ ಕನಕರಾಜ್​ ಅವರು ಮುಂದೆ ಬಂದು, ಅದನ್ನು ಶೇರ್​ ಮಾಡಬೇಡಿ ಎಂದು ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಕಳೆದ ಒಂದೂವರೆ ವರ್ಷಗಳಿಂದ ನಾವೆಲ್ಲ ಈ ಚಿತ್ರಕ್ಕಾಗಿ ಸಾಕಷ್ಟು ಕಷ್ಟಪಟ್ಟು ದುಡಿದಿದ್ದೇವೆ. ನೀವೆಲ್ಲ ಚಿತ್ರಮಂದಿರಗಳಲ್ಲೇ ಈ ಚಿತ್ರವನ್ನು ನೋಡಿ ಎಂಜಾಯ್​ ಮಾಡಬೇಕು ಎಂಬುದು ನಮ್ಮಾಸೆ. ಅದೇ ಕಾರಣಕ್ಕೆ, ಹಲವು ಸಮಸ್ಯೆಗಳ ನಡುವೆಯೂ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುತ್ತಿದ್ದೇವೆ. ಹೀಗಿರುವಾಗ ಚಿತ್ರದ ತುಣುಕುಗಳು ಲೀಕ್​ ಆಗಿವೆ. ದಯವಿಟ್ಟು ಇದನ್ನು ಯಾರೂ ಸಹ ಶೇರ್​ ಮಾಡಬೇಡಿ. ಇನ್ನೊಂದೇ ಒಂದು ದಿನ ಕಾಯಿರಿ' ಎಂದು ಮನವಿ ಮಾಡಿಕೊಂಡಿದ್ದಾರೆ.

ತುಣುಕುಗಳೇನೋ ಲೀಕ್​ ಆದವು. ಆದರೆ, ಅದನ್ನು ಲೀಕ್​ ಮಾಡಿದ್ದು ಯಾರು? ಸಾಕಷ್ಟು ತನಿಖೆಯ ನಂತರ ಸೋನಿ ಡಿಜಿಟಲ್​ ಕಂಪನಿಯ ಉದ್ಯೋಗಿಯೊಬ್ಬ ಈ ತುಣುಕುಗಳನ್ನು ಲೀಕ್​ ಮಾಡಿದ್ದಾನೆ ಎಂದು ಪತ್ತೆ ಹಚ್ಚಲಾಗಿದ್ದು, ಈಗ ಆ ಸಂಸ್ಥೆಯ ಮೇಲೆ ಚಿತ್ರತಂಡದವರು ಆಕ್ಷನ್​ ತೆಗೆದುಕೊಳ್ಳುವ ಕುರಿತು ಯೋಚಿಸಲಾಗುತ್ತಿದೆ.