ಚೆನ್ನೈ: ರಾಕಿಂಗ್ ಸ್ಟಾರ್ ಯಶ್ಗೆ ಅತಿದೊಡ್ಡ ಯಶಸ್ಸು ತಂದುಕೊಟ್ಟ ಕಿರಾತಕ ಸಿನಿಮಾದಲ್ಲಿ ಖಡಕ್ ಖಳನಾಯಕನಾಗಿ ತೆರೆಯ ಮೇಲೆ ಅಬ್ಬರಿಸಿದ್ದ ನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ತಮಿಳುನಾಡಿನ ಚೆನ್ನೈ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದಿದ್ದಾರೆ. ಬಾಲಾಜಿ ಸಾವು ಚಿತ್ರರಂಗದಕ್ಕೆ ಒಂದು ದೊಡ್ಡ ಆಘಾತವಾಗಿದೆ.
ವಿಜಯ್ ಅಭಿನಯದ ಬಿಗಿಲ್, ಭೈರವ ಸಿನಿಮಾಗಳಲ್ಲಿ ಬಾಲಾಜಿ ನಟಿಸಿದ್ದರು. ಅಲ್ಲದೆ, ಕಾಖಾಕಾಖಾ, ವೆಟ್ಟೈಯಾಟು ವಿಳೈಯಾಡು, ಪೊಲ್ಲಾದವನ್, ಎನ್ನೈ ಅರಿಂದಾಲ್ ಸೇರಿಂದತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕಿರಾತಕ ಜತೆಗೆ ಶಿವಾಜಿ ನಗರ, ಬೆಂಗಳೂರು ಅಂಡರ್ವರ್ಲ್ಡ್ ಹಾಗೂ ಡವ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಇವರು ಸಿನಿರಸಿಕರಿಗೆ ಚಿರಪರಿಚಿತರು ಎಂದು ಹೇಳಬಹುದಾಗಿದೆ.
ಮಾರ್ಚ್ 29ರಂದು ಎದೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಶನಿವಾರ (ಮಾರ್ಚ್ 30) ಕೊನೆಯುಸಿರು ಎಳೆದಿದ್ದಾರೆ. ಚೆನ್ನೈನ ಪುರಸೈವಾಲ್ಕಂನಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಟ ಯಶ್ ಸಹಾಯ ನೆನೆದಿದ್ದರು ಬಾಲಾಜಿ
ಬಾಲಾಜಿ ಅವರು ದೈವ ಭಕ್ತರಾಗಿದ್ದು, ತಮಿಳುನಾಡಿನಲ್ಲಿ ಅಮ್ಮನ್ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ದೇವಸ್ಥಾನಕ್ಕೆ ನಿರ್ಮಾಣಕ್ಕೆ ನಟ ಯಶ್ ಸಹಾಯ ಮಾಡಿದ್ದನ್ನು ಬಾಲಾಜಿ ಈ ಹಿಂದೆ ನೆನೆದಿದ್ದರು. ಯಶ್ ಅವರಿಗೆ ನಾನು ಕೃತಜ್ಙತೆ ಸಲ್ಲಿಸುತ್ತೇನೆ. ದೇಣಿಗೆ ವಿಚಾರವನ್ನು ಪದೇ ಪದೆ ಹೇಳುವುದು ಬೇಡ. ಬಂಧುಗಳಂತೆ ಅಮ್ಮನ್ ದೇವಾಲಯದ ನಿರ್ಮಾಣಕ್ಕೆ ಯಶ್ ಸಹಕರಿಸಿದರು ಎನ್ನುವ ಮೂಲಕ ರಾಕಿಭಾಯ್ ಸಹಾಯವನ್ನು ಬಾಲಜಿ ಅವರು ನೆನೆದಿದ್ದರು.
ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ
4 ವರ್ಷಗಳ ಹಿಂದೆ ಯಶ್ ಅವರು ನನಗೆ ಕರೆ ಮಾಡಿದರು. ಸಿನಿಮಾವೊಂದರಲ್ಲಿ ನಟಿಸಲು ಆಫರ್ ಮಾಡಿದರು. ಒಂದು ಸಣ್ಣ ಕೆಲಸ ಇದೆ. 20 ದಿನಗಳು ಆಗುತ್ತದೆ ಎಂದು ಹೇಳಿದ್ದೆ. ಬಳಿಕ ಏನು ಕೆಲಸ ಎಂದು ಕೇಳಿದರು. ನಾನು ತಮಿಳುನಾಡಿನಲ್ಲಿ ಒಂದು ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿದ್ದೇನೆ. ಅದು ಮುಗಿಯುವವರೆಗೂ ನಾನು ಬರಲು ಆಗುವುದಿಲ್ಲ ಎಂದಿದ್ದೆ. ಬಳಿಕ ಯಶ್ ಅವರು ನನಗೆ ಶುಭ ಕೋರಿದರು. ಇದಾದ ಕೆಲವೇ ಕ್ಷಣಗಳಲ್ಲಿ ನನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಯಿತು. ಇನ್ನು ಸಿನಿಮಾ ಪ್ರೊಡಕ್ಷನ್ ಬಗ್ಗೆಯೇ ತೀರ್ಮಾನವಾಗಿಲ್ಲ ಅಷ್ಟರಲ್ಲೇ ನೀವು ನನಗೆ ಮುಂಗಡ ಪಾವತಿಸಿದಿರಲ್ಲ ಎಂದು ಕೇಳಿದೆ. ಅದಕ್ಕೆ ಯಶ್, ಈ ಹಣ ಸಿನಿಮಾಗಾಗಿ ಅಲ್ಲ, ನಿಮ್ಮ ದೇವಸ್ಥಾನಕ್ಕೆ ನನ್ನ ದೇಣಿಗೆ ಎಂದು ಹೇಳಿದರು ಎಂದು ಸಂದರ್ಶನವೊಂದರಲ್ಲಿ ಡೇನಿಯಲ್ ಬಾಲಾಜಿ ಹೇಳಿಕೊಂಡಿದ್ದರು.
ಸಾವಿನಲ್ಲೂ ಸಾರ್ಥಕತೆ ಮೆರೆದ ಡೇನಿಯಲ್ ಬಾಲಾಜಿ
ನಟ ಡೇನಿಯಲ್ ಬಾಲಾಜಿ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಈ ವಿಚಾರ ಅಭಿಮಾನಿಗಳನ್ನು ಮತ್ತಷ್ಟು ಭಾವುಕವಾಗಿಸಿದೆ. ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಡೇನಿಯಲ್ ಬಾಲಾಜಿ ಕತ್ತಲೆಯಲ್ಲಿದವರ ಬಾಳನ್ನು ಬೆಳಕಾಗಿಸಿದ್ದಾರೆ. ಸಾವಿನ ಸುದ್ದಿ ಕೇಳಿ ಆತಂಕದಲ್ಲಿದ್ದ ಅಭಿಮಾನಿಗಳು ಈ ವಿಷಯ ಕೇಳಿ ಮತ್ತಷ್ಟು ಭಾವುಕರಾಗಿದ್ದಾರೆ.
ಚೆನ್ನೈನ ಪುರಸೈವಾಲ್ಕಂನಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ತಿರುವನ್ಮಿಯೂರಿನ ಅವರ ನಿವಾಸದಲ್ಲಿ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಸಿನಿಮಾ ರಂಗ ಹೊರತುಪಡಿಸಿ ಧಾರ್ಮಿಕ ಕಾರ್ಯಗಳಲ್ಲೂ ಡೇನಿಯಲ್ ಬಾಲಾಜಿ ಸಕ್ರಿಯರಾಗಿದ್ದು, ಅನೇಕ ದೇವಾಲಯಗಳನ್ನು ಕಟ್ಟಿಸಿದ್ದಾರೆ. ನಟನ ಅಗಲಿಕೆಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. (ಏಜೆನ್ಸೀಸ್)