ಸಿನಿವಾಣಿ

ಸ್ಲಂ ನಿವಾಸಿಗಳಿಗೆ, ವೃದ್ಧಾಶ್ರಮಗಳಿಗೆ 50 ಟನ್​ ಆಹಾರ ಪದಾರ್ಥ ನೀಡಲು ಮುಂದಾದ ಮಿಲ್ಕಿ ಬ್ಯೂಟಿ

ಮುಂಬೈ: ಈಗಾಗಲೇ ಕರೊನಾ ಹಿನ್ನೆಲೆಯಲ್ಲಿ ನೆರವಿನ ಹರಿವು ಜೋರಾಗಿಯೇ ಹರಿದು ಬರುತ್ತಿದೆ. ಎಲ್ಲ ಸಿನಿಮಾಕ್ಷೇತ್ರದವರು ಆಯಾ ಇಂಡಸ್ಟ್ರಿಗೆ ಸಂಬಂಧಪಟ್ಟವರಿಗೆ ಹಣ, ದಿನಸಿ ಪದಾರ್ಥದ ನೆರವು ನೀಡುತ್ತಿದ್ದಾರೆ. ಇದೀಗ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕೇವಲ ಸಿನಿಮಾದವರಿಗಷ್ಟೇ ಅಲ್ಲದೆ ಮುಂಬೈನ ಕೊಳಗೇರಿ ಪ್ರದೇಶದ ಜನರಿಗಾಗಿಯೂ ಕರಗಿದ್ದಾರೆ. ಬರೋಬ್ಬರಿ 50 ಟನ್​ನಷ್ಟು ಆಹಾರ ಪದಾರ್ಥಗಳನ್ನು ನೀಡಲು ಮುಂದೆ ಬಂದಿದ್ದಾರೆ. ಆ 50 ಟನ್ ಪದಾರ್ಥಗಳನ್ನು 10 ಸಾವಿರ ಕುಟುಂಬಗಳಿಗೆ ನೀಡುವ ಗುರಿ ಹೊಂದಿದ್ದಾರೆ. ಲೆಟ್ಸ್​ ಆಲ್​ ಹೆಲ್ಪ್​ ಎನ್​ಜಿಒ ಮೂಲಕ ಈ ದೇಣಿಗೆ ನೀಡಿದ್ದಾರೆ. ಇದರಲ್ಲಿ ಒಂದಷ್ಟು ಅನಾಥಾಶ್ರಮ, ವೃದ್ಧಾಶ್ರಮಗಳೂ ಸೇರಿವೆ. ಲಾಕ್​ಡೌನ್​ ಹೊತ್ತಲ್ಲಿ ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಈ ಸಹಾಯಕ್ಕೆ ತಮನ್ನಾ ಮುಂದಾಗಿದ್ದಾರೆ. (ಏಜೆನ್ಸೀಸ್​)