ಸಿನಿವಾಣಿ

ಛೇ.. ತಮನ್ನಾಗೆ ಇಂಥಾ ಅನ್ಯಾಯ ಆಗಬಾರದಿತ್ತು: ಸಾಂಬಾರಿನಲ್ಲಿ ಕರಿಬೇವಿನಂತಾದ ಮಿಲ್ಕಿ ಬ್ಯೂಟಿ! Tamannaah Bhatia

ಹೈದರಾಬಾದ್​: ಟಾಲಿವುಡ್‌ ಸಿನಿಮಾ ರಂಗದಲ್ಲಿ ಕೆಲ ವರ್ಷ ಸ್ಟಾರ್ ಹೀರೋಯಿನ್ ಆಗಿ ಆಳ್ವಿಕೆ ನಡೆಸಿದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ( Tamannaah Bhatia ) ಇದೀಗ ಬಾಲಿವುಡ್‌ ಅಂಗಳದಲ್ಲಿ ಬಿಜಿಯಾಗಿದ್ದಾರೆ. ಬಾಲಿವುಡ್​ನಲ್ಲಿ ಬೀಡು ಬಿಟ್ಟಿದ್ದರು ಕೂಡ ಸಾಂದರ್ಭಿಕವಾಗಿ ದಕ್ಷಿಣ ಭಾರತ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೋದ್ಯಮದಲ್ಲಿ ಬರೋಬ್ಬರಿ 20 ವರ್ಷ ಪೂರೈಸಿದ್ದರು ಕೂಡ ತಮನ್ನಾ ಅವರು ಅದೇ ಗ್ಲಾಮರ್ ಅನ್ನು ಇಂದಿಗೂ ಕಾಯ್ದುಕೊಂಡಿದ್ದಾರೆ.

ಸರಿ ತಮನ್ನಾ ವಿಚಾರ ಈಗ್ಯಾಕೆ? ಈ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ಅದೇನೆಂದರೆ, ಬಾಹುಬಲಿ ಚಿತ್ರದಲ್ಲಿ ತಮನ್ನಾ ಅವರಿಗೆ ಅನ್ಯಾಯವಾಗಿದೆ ಎಂದು ಅವರ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಆದಾಗ್ಯೂ, ಬಾಹುಬಲಿ ಸಿನಿಮಾದಿಂದ ತಮನ್ನಾ ನಿರಾಶೆಗೊಂಡಿದ್ದಾರೆ ಎಂಬ ವರದಿಗಳು ಈ ಹಿಂದೆಯೇ ಬಂದಿದ್ದವು. ಅಂದಿನ ವಿಚಾರ ಈಗ್ಯಾಕೆ? ಅದು ಹಳೆಯ ಸಂಗತಿ ಅಲ್ಲವೇ? ಎಂಬ ಪ್ರಶ್ನೆ ಮತ್ತೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ತಿಳಿಯಲು ಬಯಸುವುದಾದರೆ ಈ ಸ್ಟೋರಿಯನ್ನ ನೀವು ಕೊನೆಯವರೆಗೂ ಓದಲೇಬೇಕು.

ತಮನ್ನಾ ಈ ಹಿಂದೆ ಏನು ಹೇಳಿದ್ದರು?

ತಾಜಾ ಸಂಗತಿ ತಿಳಿಯುವ ಮುನ್ನ ಒಂದು ಫ್ಲ್ಯಾಶ್​ಬ್ಯಾಕ್​ಗೆ ಹೋಗಿ ಬರೋಣ. ಬಾಹುಬಲಿ ಭಾಗ 1ರ ಕತೆ ನಟಿ ತಮನ್ನಾ ಅವರ ಸುತ್ತ ಸುತ್ತುತ್ತದೆ. ಆದರೆ, ಬಾಹುಬಲಿ ಭಾಗ 2ರಲ್ಲಿ, ತಮನ್ನಾ ಅವರ ದೃಶ್ಯಗಳು ಮತ್ತು ಸಾಹಸ ಸನ್ನಿವೇಶಗಳನ್ನು ಎಡಿಟ್ ಮಾಡಲಾಗಿದೆ. ಈ ಬಗ್ಗೆ ತಮನ್ನಾ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳು ಈ ಹಿಂದೆಯೇ ಬಂದಿದ್ದವು. ಆದಾಗ್ಯೂ, ತಮನ್ನಾ ಈ ಹಿಂದೆ ಬಾಲಿವುಡ್ ಸಂದರ್ಶನವೊಂದರಲ್ಲಿ ಬಾಹುಬಲಿಯ ಬಗ್ಗೆ ಮಾತನಾಡುವ ಮೂಲಕ ಸ್ಪಷ್ಟನೆ ಸಹ ನೀಡಿದ್ದರು. ನನ್ನ ದೃಶ್ಯಗಳನ್ನು ತೆಗೆದುಹಾಕಿದ್ದರೂ ನನಗೆ ಸಂತೋಷ. ಎರಡನೇ ಭಾಗದಲ್ಲಿ ನನ್ನ ರನ್ ಟೈಮ್ ಕಡಿಮೆ ಇರುತ್ತದೆ ಎಂದು ಮೊದಲೇ ಹೇಳಿದ್ದರು. ಆ ಚಿತ್ರದೊಂದಿಗೆ ನನಗೆ ಉತ್ತಮ ಅವಕಾಶ ನೀಡಿದರು. ಆದರೆ, ಬಾಹುಬಲಿಯ ಯಶಸ್ಸನ್ನು ನನ್ನ ವೃತ್ತಿಜೀವನಕ್ಕೆ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಚಿತ್ರದಲ್ಲಿ ಪ್ರಭಾಸ್ ಮತ್ತು ರಾಣಾ ಹೆಚ್ಚು ಖ್ಯಾತಿ ಪಡೆದರು ಎಂದು ತಮನ್ನಾ ಅವರು ಈ ಹಿಂದೆ ಹೇಳಿದ್ದರು.

ಬಾಹುಬಲಿ ಎಪಿಕ್​ನಲ್ಲೂ ರಿಪೀಟ್​

ಈಗ ತಾಜಾ ಸಂಗತಿ ಕಡೆ ಬರೋಣ. ಅದೇನೆಂದರೆ, ಬಾಹುಬಲಿ 2 ರಲ್ಲಿ ಮಾತ್ರವಲ್ಲ, ನಾಳೆ ಬಿಡುಗಡೆಯಾಗುತ್ತಿರುವ ಬಾಹುಬಲಿ ಎಪಿಕ್​ನಲ್ಲಿಯೂ ತಮನ್ನಾ ಅವರ ದೃಶ್ಯಗಳನ್ನು ಕತ್ತರಿಸಲಾಗಿದೆ. ಬಾಹುಬಲಿಯ ಎರಡೂ ಭಾಗಗಳನ್ನು ಒಟ್ಟುಗೂಡಿಸಿ ಅಕ್ಟೋಬರ್​ 31 ರಂದು ಬಾಹುಬಲಿ ಎಪಿಕ್ ಹೆಸರಿನಲ್ಲಿ ಒಂದೇ ಚಿತ್ರವಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರದ ಪ್ರಚಾರದ ಭಾಗವಾಗಿ, ಪ್ರಭಾಸ್, ರಾಣಾ ಮತ್ತು ರಾಜಮೌಳಿ ಇತ್ತೀಚೆಗೆ ವಿಶೇಷ ಸಂದರ್ಶನ ನಡೆಸಿದರು.

ಪಚ್ಚ ಬೊಟ್ಟೇಸಿನಾ ಹಾಡಿಗೆ ಕತ್ತರಿ

ಈ ಸಂದರ್ಶನದಲ್ಲಿ, ರಾಜಮೌಳಿ ಅವರು ಮಾತನಾಡಿ, ಎರಡು ಬಾಹುಬಲಿ ಚಿತ್ರಗಳನ್ನು ಒಂದೇ ಚಿತ್ರವಾಗಿ ಮಾಡಲು ಸಾಕಷ್ಟು ಎಡಿಟಿಂಗ್​ ಮಾಡಲಾಗಿದೆ ಎಂದರು. ಇದೇ ವೇಳೆ ಯಾವ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂಬುದನ್ನು ಸಹ ಬಹಿರಂಗಪಡಿಸಿದರು. ರಾಜಮೌಳಿ ನೀಡಿದ ಪಟ್ಟಿಯಲ್ಲಿ, ಸಂಪೂರ್ಣ ತಮನ್ನಾ - ಪ್ರಭಾಸ್ ಲವ್ ಟ್ರ್ಯಾಕ್ ಅನ್ನು ತೆಗೆದುಹಾಕಲಾಗಿದೆ. ಅಂದರೆ, "ಪಚ್ಚ ಬೊಟ್ಟೇಸಿನಾ" ಹಾಡನ್ನು ತೆಗೆದುಹಾಕಲಾಗಿದೆ ಎಂದರು. ಈ ಬಾರಿಯೂ ತಮನ್ನಾ ಅವರ ದೃಶ್ಯಗಳನ್ನು ಹೆಚ್ಚಾಗಿ ಎಡಿಟಿಂಗ್​ ಮಾಡಲಾಗಿದೆ ಎಂಬುದನ್ನು ಇದು ತೋರಿಸುತ್ತದೆ.

ಸಾಂಬಾರಿನಲ್ಲಿ ಕರಿಬೇವು ತೆಗೆದಿಟ್ಟಂತೆ

ಇದರೊಂದಿಗೆ, ಬಾಹುಬಲಿ ಭಾಗ 2ರ ಸಮಯದಲ್ಲಿ ಮತ್ತು ಈಗ ಬಾಹುಬಲಿ ಎಪಿಕ್‌ನಲ್ಲಿಯೂ ತಮನ್ನಾ ಎಡಿಟಿಂಗ್​ಗೆ ಬಲಿಯಾಗಿದ್ದಾರೆ ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಹೇಳುತ್ತಿದ್ದಾರೆ. ತಮನ್ನಾ ಅವರ ದೃಶ್ಯಗಳನ್ನು ಹೆಚ್ಚು ಕತ್ತರಿಸಲಾಗಿದೆ ಎಂದು ಅಭಿಮಾನಿಗಳು ಸಹಾನುಭೂತಿ ತೋರಿಸುತ್ತಿದ್ದಾರೆ. ಪ್ರತಿ ಬಾರಿಯೂ ತಮನ್ನಾ ಅವರ ದೃಶ್ಯಗಳನ್ನು ಸಾಂಬಾರಿನಲ್ಲಿ ಕರಿಬೇವನ್ನು ತೆಗೆದು ಪಕ್ಕಕ್ಕೆ ಇಡುವಂತೆ ಎಡಿಟಿಂಗ್​ ಮಾಡುತ್ತಿದ್ದಾರೆ ಎಂದು ಕೆಲ ನೆಟ್ಟಿಗರು ತಮಾಷೆಯ ಮೀಮ್‌ಗಳನ್ನು ಹರಿಬಿಡುತ್ತಿದ್ದಾರೆ. ಇದರ ನಡುವೆ ಬಾಹುಬಲಿ ಎಪಿಕ್ ಬಗ್ಗೆ ತಮನ್ನಾ ಏನಾದರೂ ಹೇಳುತ್ತಾರೆಯೇ ಎಂದು ಕಾದು ನೋಡಬೇಕಿದೆ. ಒಟ್ಟಾರೆಯಾಗಿ, ಬಾಹುಬಲಿ ಚಿತ್ರದಲ್ಲಿ ತಮನ್ನಾ ಅವರಿಗೆ ಅನ್ಯಾಯವಾಗಿದೆ ಎಂಬುದು ಅವರ ಅಭಿಮಾನಿಗಳು ಅಭಿಪ್ರಾಯವಾಗಿದೆ. (ಏಜೆನ್ಸೀಸ್​)