ಕಂಗನಾ ಮತ್ತು ತಾಪ್ಸಿ ನಡುವಿನ ವಾಕ್ಸಮರ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ತಾಪ್ಸಿ ಒಬ್ಬ ಬಿ-ಗ್ರೇಡ್ ನಟಿ ಎಂದು ಕಂಗನಾ ಆರೋಪಿಸಿದ್ದರು. ಅದಕ್ಕೆ ತಾಪ್ಸಿ ಪ್ರತ್ಯುತ್ತರ ನೀಡಿದ್ದರು. ಅಲ್ಲಿಗೆ ಎಲ್ಲಾ ಮುಗಿಯಿತು ಎಂದುಕೊಂಡರೆ ಮುಗಿದಿಲ್ಲ.
ಅದಾದ ಮೇಲೂ ಕಂಗನಾ, ತಾಪ್ಸಿ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಇತ್ತೀಚೆಗೆ ಕಂಗನಾ ಮತ್ತು ಅವರ ತಂಡದವರು, ತಾಪ್ಸಿಗೆ ಎ-ಗ್ರೇಡ್ ನಟಿಯಾಗುವುದು ಹೇಗೆ ಎಂದು ಟಿಪ್ಸ್ ಕೊಟ್ಟಿದ್ದಾರೆ. ಇದನ್ನು ಕೇಳಿ ತಾಪ್ಸಿ ಸಹ ರೊಚ್ಚಿಗೆದ್ದಿದ್ದಾರೆ. ಕಂಗನಾಗೆ ಸರಿಯಾದ ಉತ್ತರವನ್ನೇ ನೀಡಿದ್ದಾರೆ.
ಇದನ್ನೂ ಓದಿ: ರಿಯಾ ಕಂಟ್ರೋಲ್ನಲ್ಲಿ ಸುಶಾಂತ್, 15 ಕೋಟಿ ರೂ. ರಹಸ್ಯ ಜತೆಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಫ್ಯಾಮಿಲಿ ಲಾಯರ್!
'ಕಂಗನಾ ಯಾಕೆ ನನ್ನ ಮೇಲೆ ಮುಗಿಬಿದ್ದಿದ್ದಾರೋ ನನಗಂತೂ ಅರ್ಥವಾಗುತ್ತಿಲ್ಲ. ಅವರದ್ದೊಂದು ಅಭಿಪ್ರಾಯವಾದರೆ, ನನ್ನದೂ ಒಂದು ಅಭಿಪ್ರಾಯ ಮತ್ತು ನಿಲುವು ಇದ್ದೇ ಇರುತ್ತದೆ. ಅವರದ್ದು ಮಾತ್ರ ಸರಿ, ನನ್ನದು ತಪ್ಪು ಎಂದು ಹೇಳುವುದಕ್ಕೆ ಅವರ್ಯಾರು? ಅವರ ಅಭಿಪ್ರಾಯಕ್ಕೆ ನನ್ನದು ಮ್ಯಾಚ್ ಆಗಲಿಲ್ಲ ಎಂದರೆ, ಅದು ನನ್ನ ತಪ್ಪಲ್ಲ ಅಲ್ವಾ?' ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಇನ್ನಷ್ಟು ಮಾತನಾಡಿರುವ ತಾಪ್ಸಿ, 'ಇಷ್ಟಕ್ಕೂ ಅವರ ಸಮಸ್ಯೆ ಏನು ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಒಂದು ಕಡೆ ಅವರು ಹೊರಗಿನವರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಕಿತ್ತಾಡುತ್ತಾರೆ. ಇನ್ನೊಂದು ಕಡೆ ನನ್ನಂಥ ಹೊರಗಿನವರ ಜತೆಗೂ ಕಾಲುಕೆರೆದುಕೊಂಡು ಜಗಳ ಮಾಡುತ್ತಾರೆ. ಇಷ್ಟಕ್ಕೂ ಅವರು ಏನು ಹೇಳುವುದಕ್ಕೆ ಹೊರಟಿದ್ದಾರೆ? ಯಾರ ಪರವಾಗಿ ಮಾತನಾಡುತ್ತಿದ್ದಾರೆ? ಎಂಬುದೇ ಗೊತ್ತಾಗುತ್ತಿಲ್ಲ' ಎಂದು ಹೇಳಿಕೊಂಡಿದ್ದಾರೆ.
ಕಂಗನಾ ಹೊರಗಿನವರ ಪರವಾಗಿ ಮಾತನಾಡುವುಕ್ಕಿಂತ ಹೆಚ್ಚಾಗಿ, ವೈಯಕ್ತಿಕ ಕಾರಣಗಳಿಗಾಗಿ ಜಗಳ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ತಾಪ್ಸಿ, 'ಒಂದು ಕಡೆ ಬೇರೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಕಂಗನಾ ಆರೋಪಿಸುತ್ತಾರೆ. ಇನ್ನೊಂದು ಕಡೆ ಅವರೇ ಬೇರೆಯವರಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ' ಎಂಬುದು ತಾಪ್ಸಿ ಪ್ರಶ್ನೆ.
ಸ್ವಜನಪಕ್ಷಪಾತದಿಂದ ತಮಗೆ ಸಮಸ್ಯೆಯಾಗಿದ್ದರೂ, ಅದರ ವಿರುದ್ಧ ಕೆಟ್ಟದಾಗಿ ಮಾತನಾಡುವುದಕ್ಕೆ ಇಷ್ಟವಿಲ್ಲ ಎಂದು ತಾಪ್ಸಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. 'ಹೊಸಬರಿಗೆ ಮತ್ತು ಹೊರಗಿನವರಿಗೆ ಕಿರುಕುಳ ಸಹಜ. ಹಾಗಂತ ಎಲ್ಲದ್ದಕ್ಕೂ ಅದೇ ಕಾರಣ ಎಂದು ಹೇಳುವುದಕ್ಕೆ ನನಗೆ ಇಷ್ಟವಿಲ್ಲ. ನನಗೂ ಸ್ವಜನಪಕ್ಷಪಾತದ ಬಗ್ಗೆ ಚಿತ್ರರಂಗದಿಂದ, ಮೀಡಿಯಾದಿಂದ ಮತ್ತು ಜನರಿಂದ ಸಮಸ್ಯೆ ಆಗಿದೆ. ಹಾಗಂತ ಅದನ್ನೇ ದೊಡ್ಡದು ಮಾಡಿಕೊಂಡು ಕೂರುವುದಕ್ಕೆ ನನಗೆ ಇಷ್ಟ ಇಲ್ಲ. ನಾವೆಲ್ಲರೂ ಒಂದೇ ಚಿತ್ರರಂಗದವರು. ಹಾಗಾಗಿ ಸುಮ್ಮನೆ ಎಲ್ಲರನ್ನೂ ದೂರವುದಕ್ಕೆ ನನಗೆ ಇಷ್ಟವಿಲ್ಲ. ಮಾಡುವುದಕ್ಕೆ ಕೆಲಸ ಸಾಕಷ್ಟಿದೆ' ಎಂದು ಅವರು ಮಾತು ಮುಗಿಸಿದ್ದಾರೆ.