ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಅವರ ಹಣ ದುರ್ಬಳಕೆಯಾದ ಯಾವುದೇ ದಾಖಲೆಗಳು ಸಿಕ್ಕಿಲ್ಲ ಎಂದು ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಹೇಳಿದ್ದರು. ಈಗ ಸುಶಾಂತ್ ಸಿಂಗ್ ರಜಪೂತ್ ಪರ ವಕೀಲ ವಿಕಾಸ್ ಸಿಂಗ್ ಸಹ ಇದೇ ಮಾತನ್ನು ಹೇಳಿದ್ದಾರೆ.
ಇದಕ್ಕೂ ಮುನ್ನ, ಕೆ.ಕೆ. ಸಿಂಗ್ ಅವರು ತಮ್ಮ ಮಗ ಸುಶಾಂತ್ ದುಡಿದ ಹಣ ದುರ್ಬಳಕೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಅದರಲ್ಲೂ ಸುಶಾಂತ್ ಗೆಳತಿ ರಿಯಾ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದ್ದರು. ಈ ಸಂಬಂಧ ಅವರು ದೂರು ದಾಖಲಿಸಿದ್ದರು. ಈ ಸಂಬಂಧ ಇಡಿ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದರು. ಸಾಕಷ್ಟು ವಿಚಾರಣೆ ಮತ್ತು ತನಿಖೆಯ ನಂತರ, ಸುಶಾಂತ್ ಹಣವನ್ನು ರಿಯಾ ದುರ್ಬಳಕೆ ಮಾಡಿಕೊಂಡ ಯಾವುದೇ ದಾಖಲೆ ಇಲ್ಲ ಎಂದು ಹೇಳಿದ್ದರು.
ಈ ಸಂಬಂಧ ಮಾತನಾಡಿರುವ ವಿಕಾಸ್ ಸಿಂಗ್, 'ಸುಶಾಂತ್ ಅವರ ಹಣಕಾಸಿನ ವಿಷಯದ ಬಗ್ಗೆ ಅವರ ಕುಟುಂಬದವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಏಕೆಂದರೆ, ಅವರು ಮೊದಲಿನಿಂದಲೂ ಆ ವಿಷಯದ ಬಗ್ಗೆ ತಲೆ ಹಾಕಿರಲಿಲ್ಲ. ಆದರೆ, ರಿಯಾ ಸುಶಾಂತ್ ಅವರನ್ನು ಕುಟುಂಬದವರಿಂದ ದೂರ ಮಾಡಿದ್ದನ್ನು ನೋಡಿ ಮನೆಯವರಿಗೆ ಅವರ ಮೇಲೆ ಸಂಶಯವಿತ್ತು. ಇದಕ್ಕಿದ್ದಂತೆ ಸುಶಾಂತ್ ಅವರ ಸಿಎ ಬದಲಾದರು. ಒಂದಿಷ್ಟು ಅನುಮಾನಾಸ್ಪದ ಚಟುವಟಿಕೆಗಳು ನಡೆದಿದ್ದರಿಂದ ಸಹಜವಾಗಿಯೇ ಮನೆಯವರು ಸುಶಾಂತ್ ಹಣ ದುರ್ಬಳಕೆಯಾಗಿರುವ ಸಾಧ್ಯತೆ ಇರಬಹುದು ಎಂದು ನಂಬಿದ್ದರು' ಎಂದು ಹೇಳಿದ್ದಾರೆ.
ಸದ್ಯದ ಮಟ್ಟಿಗೆ ಸುಶಾಂತ್ ಹಣದಲ್ಲಿ ಯಾವುದೇ ಅವ್ಯವಹಾರ ಆದ ದಾಖಲೆಗಳು ಇಡಿಯವರಿಗೆ ಸಿಕ್ಕಿಲ್ಲ ಎಂದಿರುವ ವಿಕಾಸ್ ಸಿಂಗ್, 'ಸುಶಾಂತ್ ತಾವು ದುಡಿದ ಹಣದಲ್ಲಿ ಏನು ಮಾಡುತ್ತಿದ್ದರು, ಎಷ್ಟು ಉಳಿಸಿದ್ದರು ಎಂಬುದು ಅವರ ಮನೆಯವರಿಗೆ ಗೊತ್ತಿಲ್ಲ. ಹಾಗಾಗಿ 15 ಕೋಟಿಯಷ್ಟು ಹಣವನ್ನು ಸುಶಾಂತ್ ಅಕೌಂಟ್ನಿಂದ ತೆಗೆಯಲಾಗಿದೆ ಎಂದು ಹೇಳಿದ್ದರು. ಬಹುಶಃ ತಪ್ಪುಕಲ್ಪನೆಯಿಂದ ಇಷ್ಟೆಲ್ಲಾ ಆಗಿದೆ. ಮುಂದಿನ ದಿನಗಳಲ್ಲಿ ಇಡಿ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ವರದಿ ಕೊಡಲಿದೆ' ಎಂದು ಹೇಳಿದ್ದಾರೆ.