ಸಿನಿವಾಣಿ

ಮುಂದಿನ ಫೆಬ್ರವರಿಯಲ್ಲಿ ಸುಶಾಂತ್ ಮದುವೆಯಾಗಬೇಕಿತ್ತಂತೆ ...

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜನಪೂತ್​ ನಿಧನರಾಗಿ 11 ದಿನಗಳಾಗಿವೆ. ಈ ಸಂದರ್ಭದಲ್ಲಿ ಅವರ ನೆನಪಿನಲ್ಲಿ ಇತ್ತೀಚೆಗೆ ಶ್ರದ್ಧಾಂಜಲಿ ಸಭೆಯೊಂದನ್ನು ಪಟ್ನಾದಲ್ಲಿ ಆಯೋಜಿಸಲಾಗಿತ್ತು. ಕುಟುಂಬ ಸದಸ್ಯರು ಮತ್ತು ಹಿತೈಷಿಗಳೆಲ್ಲಾ ಭಾಗವಹಿಸಿದ್ದ ಈ ಸಭೆಯಲ್ಲಿ ಸುಶಾಂತ್​ ಅವರ ತಂದೆ, ಮಗನ ಜತೆಗೆ ಆಡಿದ ಕೊನೆಯ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಇಷ್ಟವಾದ ಹುಡುಗಿಯನ್ನು ಮದುವೆ ಮಾಡಿಕೊಳ್ಳಲು ಅವನಿಗೆ ಹೇಳುತ್ತಲೇ ಇದ್ದೆ. ಕೊನೆಯ ಬಾರಿಗೆ ಅವನು ಫೋನ್​ ಮಾಡಿದಾಗಲೂ ಹೇಳಿದ್ದೆ. ಕರೊನಾ ಗಲಾಟೆಗಳೆಲ್ಲಾ ಮುಗಿದ ಮೇಲೆ ಮದುವೆಯಾಗುವುದಾಗಿ ಹೇಳಿದ್ದ. ಇದೆಲ್ಲ ಮುಗಿದ ಮೇಲೆ ಒಂದು ಚಿತ್ರ ಬಿಡುಗಡೆಯಾಗುವುದಕ್ಕಿದೆ, ಅದರ ನಂತರ ಮುಂದಿನ ಫೆಬ್ರವರಿಯಲ್ಲಿ ಮದುವೆಯಾಗುವುದಾಗಿ ಸುಶಾಂತ್​ ಹೇಳಿದ್ದ ಎಂದು ಅವರ ತಂದೆ ಕೆ.ಕೆ. ಸಿಂಗ್​ ನೆನಪಿಸಿಕೊಂಡಿದ್ದಾರೆ.

ಮೊದಲೆಲ್ಲಾ ಸುಶಾಂತ್​ ಬಹಳ ಚೆನ್ನಾಗಿ ಮಾತನಾಡುತ್ತಿದ್ದರಂತೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾತು ಕಡಿಮೆ ಮಾಡಿದ್ದ ಎಂದು ಅವರ ತಂದೆ ಒಪ್ಪಿಕೊಂಡಿದ್ದಾರೆ. ಮುಂಚೆ ತುಂಬಾ ಮಾತಾಡುತ್ತಿದ್ದ. ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುತ್ತಿದ್ದ. ಆದರೆ, ಈಗೀಗ ಮಾತು ಕಡಿಮೆ ಮಾಡಿದ್ದ. ಅವನಿಗೆ ಡಿಪ್ರೆಶನ್​ ಇರುವ ವಿಷಯವೂ ನನಗೆ ಗೊತ್ತಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ಸುಶಾಂತ್​ನ ಗರ್ಲ್​ಫ್ರೆಂಡ್​ ರಿಯಾ ಚಕ್ರವರ್ತಿ ಬಗ್ಗೆ ತಮಗೆ ಯಾವುದೇ ವಿಷಯ ಗೊತ್ತಿಲ್ಲ ಎಂದು ಹೇಳಿಕೊಂಡಿರುವ ಅವರು, ನನಗೆ ರಿಯಾ ಬಗ್ಗೆ ಗೊತ್ತಿಲ್ಲ. ಆದರೆ, ಅಂಕಿತಾ ಲೋಖಂಡೆ ಬಗ್ಗೆ ಗೊತ್ತು. ಒಮ್ಮೆ ಮುಂಬೈಗೆ ಬಂದಾಗಲೂ ಸುಶಾಂತ್​ ಆಕೆಯನ್ನು ಭೇಟಿ ಮಾಡಿಸಿದ್ದ. ಸುಶಾಂತ್​ ಮತ್ತು ಅಂಕಿತಾ ಬಹಳ ವರ್ಷಗಳಿಂದ ಪರಿಚಿತರು. ಒಟ್ಟಿಗೆ ಸೀರಿಯಲ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ನನಗೆ ಗೊತ್ತಿರುವಂತೆ ಸುಶಾಂತ್​ಗೆ ಹತ್ತಿರವಿದ್ದ ಒಬ್ಬಳೆಂದರೆ ಅದು ಅಂಕಿತಾ ಮಾತ್ರ. ರಿಯಾ ಚಕ್ರವರ್ತಿ ಬಗ್ಗೆ ನನಗೆ ಯಾವುದೇ ವಿಷಯ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.