ಸಿನಿವಾಣಿ

ಅಮರ್​, ಅಕ್ಬರ್​, ಆಂಟೋನಿಗೆ ಸುಶಾಂತ್​ ದುಡ್ಡು ಕೊಟ್ಟಿದ್ದು ಯಾಕೆ?

ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ವಿಚಾರವಾಗಿ ಸಾಕಷ್ಟು ವಿಷಯಗಳು ಬಹಿರಂಗಗೊಳ್ಳುತ್ತಿದ್ದು, ಈಗ ಸುಶಾಂತ್​ ಫಾರ್ಮ್​ಹೌಸ್​ ನೋಡಿಕೊಳ್ಳುತ್ತಿರುವ ರಯೀಸ್​ ಎಂಬಾತ ಇನ್ನೊಂದು ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ಅದೇನೆಂದರೆ, ಸುಶಾಂತ್​ ಸಾಯುವುದಕ್ಕಿಂತ ಒಂದು ದಿನದ ಮುಂಚೆ ಅಮರ್​, ಅಕ್ಬರ್​, ಆಂಟೋನಿ ನೋಡಿಕೊಳ್ಳುವುದಕ್ಕೆ ಒಂದಿಷ್ಟು ಹಣವನ್ನು ಕೊಟ್ಟಿದ್ದರಂತೆ. ಅದಾಗಿ ಮರುದಿನವೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಷ್ಟಕ್ಕೂ ಈ ಅಮರ್​, ಅಕ್ಬರ್​ ಮತ್ತು ಆಂಟೋನಿ ಯಾರು ಎಂಬ ಪ್ರಶ್ನೆ ಬರಬಹುದು? ಈ ಅಮರ್, ಅಕ್ಬರ್​, ಆಂಟೋನಿ ಬೇರ್ಯಾರೂ ಅಲ್ಲ, ಸುಶಾಂತ್​ ಅವರ ಮುದ್ದಿನ ನಾಯಿಗಳು. ಸುಶಾಂತ್​ ಅವರು ತಮ್ಮ ಲೋನಾವಾಲಾದ ಫಾರ್ಮ್​ಹೌಸ್​ನಲ್ಲಿ ಈ ನಾಯಿಗಳನ್ನು ಸಾಕಿದ್ದರಂತೆ. ಅವುಗಳನ್ನು ನೋಡುವುದಕ್ಕೆ ಆಗಾಗ ಅಲ್ಲಿಗೆ ಹೋಗುತ್ತಿದ್ದರಂತೆ. ಸಾಯುವುದಕ್ಕೆ ಒಂದು ದಿನ ಮುಂಚೆ, ಆ ನಾಯಿಗಳ ಖರ್ಚಿಗೆಂದು ಅವರು ಒಂದಿಷ್ಟು ಹಣವನ್ನು ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ರಯೀಸ್​, 'ಜೂನ್​ 14ರ ಮಧ್ಯಾಹ್ನದಂದು, ಸುಶಾಂತ್​ ಅವರು ಆತ್ಮಹತ್ಯೆ ಮಾಡಿಕೊಂಡ ವಿಷಯ ಟಿವಿ ಚಾನಲ್​ಗಳಲ್ಲಿ ನೋಡಿ ನಿಜಕ್ಕೂ ಆಘಾತವಾಯಿತು. ಅದಕ್ಕೆ ಒಂದು ದಿನದ ಮುಂಚೆ ಅವರು ತಮ್ಮ ಮುದ್ದು ನಾಯಿಗಳಿಗೆ ಅಗತ್ಯ ವಸ್ತುಗಳನ್ನು ಖರೀದಿಸುವುದಕ್ಕೆ ನನ್ನ ಅಕೌಂಟ್​ಗೆ ಹಣವನ್ನು ಹಾಕಿದ್ದರು' ಎಂದು ಹೇಳಿಕೊಂಡಿದ್ದಾರೆ.

ಬರೀ ಅಷ್ಟೇ ಅಲ್ಲ, ಸುಶಾಂತ್​ಗೆ ಆ ಫಾರ್ಮ್​ಹೌಸ್​ಗೆ ಶಿಫ್ಟ್​ ಆಗಿ ಅಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಆಸೆಪಟ್ಟಿದ್ದರಂತೆ. ಈ ಕುರಿತು ಮಾತನಾಡಿರುವ ಅವರು, 'ಯೂರೋಪ್​ ಟ್ರಿಪ್​ಗೆ ಹೋಗುವ ಮುನ್ನ ಸುಶಾಂತ್​ ಇಲ್ಲಿಗೆ ಪದೇಪದೇ ಬರುತ್ತಿದ್ದರು. ಯೂರೋಪ್​ ಟ್ರಿಪ್​ನ ನಂತರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರು ಇತ್ತ ಕಡೆ ಹೆಚ್ಚು ಬರುತ್ತಿರಲಿಲ್ಲ. ಅವರಿಗೆ ಈ ಫಾರ್ಮ್​ ಹೌಸ್​ ಖರೀದಿಸಿ, ಇಲ್ಲೇ ನೆಲಗೊಳ್ಳುವ ಆಸೆ ಇತ್ತು' ಎಂದು ರಯೀಸ್​ ಹೇಳಿದ್ದಾರೆ.

ಸುಶಾಂತ್​ ತಮ್ಮ ಫಾರ್ಮ್​ಹೌಸ್​ಗೆ ಫೆಬ್ರವರಿಯಲ್ಲಿ ಕೊನೆಯದಾಗಿ ಬಂದಿದ್ದರಂತೆ. ಅದಕ್ಕೂ ಮುನ್ನ ರಿಯಾ ಮತ್ತು ಅವರ ತಂದೆಯ ಹುಟ್ಟುಹಬ್ಬಗಳನ್ನು ಅವರು ಅದೇ ಫಾರ್ಮ್​ಹೌಸ್​ನಲ್ಲಿ ಆಚರಿಸಿದ್ದರಂತೆ.