ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು 15 ದಿನಗಳಾಗಿವೆ. ಈ 15 ದಿನಗಳಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಈ ಆತ್ಮಹತ್ಯೆಗೆ ಕಾರಣವೇನಿರಬಹುದು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ಸುಶಾಂತ್ ಕುಟುಂಬದವರು, ಆಪ್ತರು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಮುಂಬೈ ಪೊಲೀಸ್ ವಿಚಾರಣೆ ನಡೆಸಿದ್ದು, ಹಲವು ವಿಷಯಗಳನ್ನು ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಾಯುವುದಕ್ಕೆ ಮುನ್ನ ಸುಶಾಂತ್ ಏನು ಮಾಡಿದ್ದರು ಎಂಬುದನ್ನು ತನಿಖೆ ನಡೆಸಿದ್ದಾರೆ.
ಈ ತನಿಖೆ ಮುಗಿದಿದ್ದು, ಸುಶಾಂತ್ ಸಾಯುವುದಕ್ಕೆ ಮುನ್ನ ಏನು ಮಾಡಿದ್ದರು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಸುಶಾಂತ್ ಸಾಯುವುದಕ್ಕಿಂತ ಮುನ್ನ ತಮ್ಮ ಹೆಸರನ್ನು ಗೂಗಲ್ ಮಾಡಿಕೊಂಡು ನೋಡಿದ್ದರಂತೆ. ಜೂನ್ 14ರ ಬೆಳಿಗ್ಗೆ ಸುಮಾರು 10.15ಕ್ಕೆ ತಮ್ಮ ಕೋಣೆ ಸೇರಿಕೊಂಡ ಸುಶಾಂತ್, ಮೊಬೈಲ್ನಲ್ಲಿ ಸ್ವಲ್ಪ ಹೊತ್ತು ಗೂಗಲ್ ಮಾಡಿದ್ದಾರೆ. ಗೂಗಲ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಎಂಬ ಹೆಸರು ಟೈಪ್ ಮಾಡಿದ್ದಾರೆ. ತಮಗೆ ಸಂಬಂಧಿಸಿದ ಕೆಲವು ಲೇಖನ ಮತ್ತು ಸುದ್ದಿಗಳನ್ನು ಓದಿದ್ದಾರೆ. ಆ ನಂತರ ಏನಾಯಿತೋ ಏನೋ ಗೊತ್ತಿಲ್ಲ, ಮೊಬೈಲ್ ಎತ್ತಿಟ್ಟು, ಫ್ಯಾನ್ಗೆ ನೇಣು ಹಾಕಿಕೊಂಡು, ಕೊನೆಯುಸಿರೆಳೆದಿದ್ದಾರೆ.
ಸುಶಾಂತ್ ಸಾಯುವುದಕ್ಕೆ ಕೆಲವು ದಿನಗಳ ಹಿಂದೆ ಬಹಳ ಸ್ಟ್ರೆಸ್ನಲ್ಲಿದ್ದರು ಎಂದು ಅವರ ಕೆಲವು ಸ್ನೇಹಿತರು ಮತ್ತು ಮನೆಗೆಲಸದವರು ಪೊಲೀಸರಿಗೆ ತಿಳಿಸಿದ್ದಾರೆ. ಸುಶಾಂತ್ಗೆ ಯಾರೋ ತಮ್ಮನ್ನು ತುಳಿಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಬಲವಾದ ಅನುಮಾನ ಇತ್ತಂತೆ. ಅಷ್ಟೇ ಅಲ್ಲ, ಈ ಕುರಿತು ಅವರು ತಮ್ಮ ಸ್ನೇಹಿತರೊಂದಿಗೆ ಚರ್ಚೆಯನ್ನೂ ಮಾಡಿದ್ದರಂತೆ.
ಯಾರೋ ತುಳಿಯುತ್ತಿದ್ದಾರೆ ಎಂಬ ಅನುಮಾನ ಮತ್ತು ಭಯಗಳೇ ಅವರ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸರು ಈ ಕುರಿತು ವಿಚಾರಣೆ ನಡೆಸುತ್ತಿದ್ದು, ಈ ಪ್ರಕರಣ ಯಾವ ತಿರುವು ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.