ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ 'ಸೂಪರ್ಸ್ಟಾರ್' ಚಿತ್ರದ ನಾಯಕನ ಇಂಟ್ರೋಡಕ್ಷನ್ ಟೀಸರ್ಗೆ 'ರಾಕಿಂಗ್ ಸ್ಟಾರ್' ಯಶ್ ಧ್ವನಿಯಾಗಿದ್ದಾರೆ. ಈಗ ಕನ್ನಡ ಚಿತ್ರರಂಗದ ಮತ್ತೊಬ್ಬ ಸ್ಟಾರ್, ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ.
ಈ ಬಾರಿ, ಸಾಥ್ ಕೊಟ್ಟಿರುವವರು 'ರೋರಿಂಗ್ ಸ್ಟಾರ್' ಶ್ರೀಮುರಳಿ. ಇಂದು ನಿರಂಜನ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ, ಚಿತ್ರದ ನಾಯಕನ ಇಂಟ್ರೋಡಕ್ಷನ್ ಟೀಸರ್ ಬಿಡುಗಡೆ ಮಾಡಿದ ಶ್ರೀಮುರಳಿ, 'ಸೂಪರ್ಸ್ಟಾರ್' ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಟೀಸರ್ ಬಿಡುಗಡೆ ಮಾಡಿ ಮಾತನಾಡಿರುವ ಶ್ರೀಮುರಳಿ, 'ಕೆಲವರು ಸ್ಟಾರ್ ಆಗಿ ಚಿತ್ರರಂಗಕ್ಕೆ ಬಂದರೆ, ನಿರಂಜನ್ ಸೂಪರ್ಸ್ಟಾರ್ ಆಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಅವರಿಗೆ ಶುಭವಾಗಲಿ. ಟೀಸರ್ ಬಹಳ ಚೆನ್ನಾಗಿ ಬಂದಿದೆ. ಬೇಕಾದರೆ ಬರೆದಿಟ್ಟುಕೊಳ್ಳಿ, ನಿರಂಜನ್ ಕನ್ನಡ ಚಿತ್ರರಂಗದ ಮುಂದಿನ ಸೂಪರ್ಸ್ಟಾರ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಟೀಸರ್ನ ಕೊನೆಯ ಶಾಟ್ ನೋಡಿದರೆ ಅದು ಗೊತ್ತಾಗುತ್ತದೆ. ಅವರ ಆಟಿಟ್ಯೂಡ್ ಬಹಳ ಹಿಡಿಸಿತು' ಎಂದು ಶ್ರೀಮುರಳಿ ಹೇಳಿದ್ದಾರೆ.
ನಿರಂಜನ್ಗೆ ಕಿವಿಮಾತು ಹೇಳಿದ ಶ್ರೀಮುರಳಿ. 'ಚಿತ್ರರಂಗದಲ್ಲಿ ನನ್ನದು 17 ವರ್ಷಗಳ ಅನುಭವ. ಈ ಅನುಭವದಲ್ಲಿ ನಾನು ಎರಡು ವಿಷಯಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಮೊದಲಿಗೆ ಇಲ್ಲಿ ಕಷ್ಟ ಮತ್ತು ಯಶಸ್ಸು ಬಹಳ ಕಾಮನ್. ಆಗಾಗ ಎರಡೂ ಎದುರಾಗುತ್ತದೆ. ಎದುರಿಸುವ ಶಕ್ತಿ ಇರಬೇಕು. ಇನ್ನು, ಇಲ್ಲಿ ಎಲ್ಲರೂ ಒಳ್ಳೆಯವರೇ. ಯಾರೂ ಕೆಟ್ಟವರಲ್ಲ. ಎಲ್ಲರೂ ಒಳ್ಳೆಯವರು ಎಂಬ ಮನೋಭಾವದಿಂದ ಮುನ್ನೆಡೆ' ಎಂದು ಶ್ರೀಮುರುಳಿ ಕಿವಿ ಮಾತು ಹೇಳಿದರು.
ಇದನ್ನೂ ಓದಿ: ಸಾರಾ-ಸುಶಾಂತ್ ಸಂಬಂಧದಲ್ಲಿ ಬಿರುಕು ಬಿಟ್ಟಿದ್ದು ಯಾಕೆ?
ಇನ್ನು ನಿರಂಜನ್ಗೆ ಶುಭ ಹಾರೈಸಿದ ಉಪೇಂದ್ರ, 'ಈ ಚಿತ್ರದ ಟೈಟಲ್ ಕೇಳಿದರೆ ಬಹಳ ಭಯವಾಗುತ್ತದೆ. ಏಕೆಂದರೆ, 'ಸೂಪರ್ಸ್ಟಾರ್' ಎಂಬ ದೊಡ್ಡ ಟೈಟಲ್ ಇಟ್ಟಿದ್ದಾರೆ. ಇದರಿಂದ ನಿರ್ದೇಶಕ ಮತ್ತು ಹೀರೋ ಇಬ್ಬರ ಮೇಲೂ ಜವಾಬ್ದಾರಿ ಜಾಸ್ತಿ. ಜವಾಬ್ದಾರಿ ಜಾಸ್ತಿ ಎಂದು ಗೊತ್ತಿದ್ದೂ ಇಟ್ಟಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ' ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಿಯಾಂಕಾ ಉಪೇಂದ್ರ, 'ಬಹದ್ದೂರ್' ಚೇತನ್, 'ಅಯೋಗ್ಯ' ಮಹೇಶ್, ಸೌಂದರ್ಯ ಜಗದೀಶ್, ಅಲೋಕ್ ಸೇರಿದಂತೆ ಹಲವರು ಹಾಜರಿದ್ದು, ನಿರಂಜನ್ ಮತ್ತು ಚಿತ್ರತಂಡಕ್ಕೆ ಶುಭಕೋರಿದ್ದಾರೆ.