ಸಿನಿವಾಣಿ

'ಜೈಲರ್' ಆಗಲಿದ್ದಾರೆ ಸೂಪರ್​​ಸ್ಟಾರ್ ರಜನಿಕಾಂತ್..

ಮುಂಬೈ: ಸೂಪರ್​ಸ್ಟಾರ್ ರಜನಿಕಾಂತ್ ಅವರು ಸದ್ಯದಲ್ಲೇ ಜೈಲರ್​ ಆಗಲಿದ್ದಾರೆ. ಅರ್ಥಾತ್, ಅವರ ಮುಂದಿನ ಸಿನಿಮಾದ ಶೀರ್ಷಿಕೆ ನಿಗದಿಯಾಗಿದೆ. ಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ಸನ್​ ಪಿಕ್ಚರ್ಸ್​ ಈ ವಿಷಯವನ್ನು ಅಧಿಕೃತವಾಗಿ ತಿಳಿಸಿದೆ.

ಇದು ರಜನಿಕಾಂತ್ ಅವರ 169ನೇ ಸಿನಿಮಾ ಆಗಿದ್ದು, ಇದನ್ನು ಖ್ಯಾತ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶಿಸಲಿದ್ದಾರೆ. ಈ ಸಿನಿಮಾಗೆ ನೆಲ್ಸನ್​ ಅವರೇ ಚಿತ್ರಕಥೆ ಬರೆದಿದ್ದು, ಆ್ಯಕ್ಷನ್​-ಕಟ್ ಹೇಳಲಿದ್ದಾರೆ.

"#Thalaivar169 is #Jailer" ಎಂದು ಸನ್​ ಪಿಕ್ಚರ್ಸ್​ ತಿಳಿಸುವ ಮೂಲಕ ರಜನಿಕಾಂತ್ ಮುಂದಿನ ಸಿನಿಮಾ ಶೀರ್ಷಿಕೆ ಬಹಿರಂಗಗೊಂಡಿದೆ. ಸನ್​ ಪಿಕ್ಚರ್ಸ್​ ಜತೆ ನೆಲ್ಸನ್​ಗೆ ಇದು ಎರಡನೇ ಸಿನಿಮಾ. ಸನ್​ ಪಿಕ್ಚರ್ಸ್ ನಿರ್ಮಾಣ, ವಿಜಯ್ ಅಭಿನಯದ ಬೀಸ್ಟ್ ಚಿತ್ರವನ್ನೂ ನೆಲ್ಸನ್​ ನಿರ್ದೇಶಿಸಿದ್ದರು.

ಕಲಾನಿಧಿ ಮಾರನ್​ ಈ ಚಿತ್ರವನ್ನು ಅರ್ಪಿಸುತ್ತಿದ್ದು, ಇದಕ್ಕೆ ಅನಿರುಧ್ ರವಿಚಂದರ್​ ಸಂಗೀತ ಸಂಯೋಜಿಸಲಿದ್ದಾರೆ. ಉಳಿದ ತಾರಾಗಣ ಹಾಗೂ ಚಿತ್ರತಂಡದ ಕುರಿತ ಅಧಿಕೃತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.