ಸಿನಿವಾಣಿ

ಸನ್ನಿ ಡಿಯೋಲ್​ಗೆ 'ವೈ' ಕೆಟಗರಿ ಭದ್ರತೆ ... ಯಾಕೆ ಹೇಳಿ?

manjunathktgns

ಮುಂಬೈ: ಎರಡು ತಿಂಗಳುಗಳ ಹಿಂದಷ್ಟೇ ಬಾಲಿವುಡ್​ ನಟಿ ಕಂಗನಾ ರಣಾವತ್​ಗೆ 'ವೈ' ಪ್ಲಸ್​ ಸೆಕ್ಯುರಿಟಿ ಕೊಟ್ಟಿದ್ದ ಕೇಂದ್ರ ಸರ್ಕಾರವು, ಈ ಕುರಿತು ಸಾಕಷ್ಟು ಮುಜುಗರ ಅನುಭವಿಸಿತ್ತು. ತೆರಿಗೆ ಕಟ್ಟುವವರ ಹಣದಲ್ಲಿ ನಟಿಯೊಬ್ಬರಿಗೆ ಈ ರೀತಿ ಭದ್ರತೆ ಕೊಟ್ಟಿದ್ದಿಕ್ಕೆ ನೆಟ್ಟಿಗರು ಗರಂ ಆಗಿದ್ದರು.

ಈಗ ನಟ ಮತ್ತು ಸಂಸದ ಸನ್ನಿ ಡಿಯೋಲ್​ ಅವರಿಗೆ ಕೇಂದ್ರ ಸರ್ಕಾರವು ಬುಧವಾರ ವೈ ಶ್ರೇಣಿ ಭದ್ರತೆಯನ್ನು ನೀಡಿ ಆದೇಶ ಹೊರಡಿಸಿದೆ. ವೈ ಕೆಟಗರಿಯಡಿ ಇಬ್ಬರು ಕಮಾಂಡೋಗಳು ಸೇರಿದಂತೆ 11 ಸಿಬ್ಬಂದಿಯನ್ನು ಭದ್ರತೆಗೆಂದು ನೀಡಲಾಗಿದೆ.

ಇಷ್ಟಕ್ಕೂ ಸನ್ನಿ ಡಿಯೋಲ್​ ಅವರಿಗೆ ಭದ್ರತೆ ನೀಡಿದ್ದು ಯಾಕೆ ಎಂಬ ಪ್ರಶ್ನೆ ಬರಬಹುದು. ಗುರುದಾಸಪುರದ ಸಂಸದರೂ ಆಗಿರುವ ಸನ್ನಿ ಡಿಯೋಲ್​ ಅವರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಪರವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲ, ಕೆಲವರು ರೈತರನ್ನು ಎತ್ತಗಟ್ಟುತ್ತಿರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಅವರಿಗೆ ಭದ್ರತೆ ನೀಡಲಾಗಿದೆಯಂತೆ.

ಕಳೆದ ತಿಂಗಳಿನಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ಕುರಿತು ರೈತರು ಹೋರಾಟ ಮಾಡುತ್ತಲಿದ್ದಾರೆ. ಈ ವಿಷಯವಾಗಿ ಟ್ವೀಟ್​ ಮಾಡಿದ್ದ ಸನ್ನಿ ಡಿಯೋಲ್​, 'ಕೆಲವರು ಸರ್ಕಾರ ಮತ್ತು ರೈತರ ನಡುವೆ ಹುಳಿ ಹಿಂಡುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಅವರಿಗೆ ರೈತರ ಬಗ್ಗೆ ಯಾವುದೇ ಕಳಕಳಿಯಿಲ್ಲ. ನಮ್ಮ ಪಕ್ಷಕ್ಕೆ ರೈತರ ಕುರಿತು ಸಾಕಷ್ಟು ಕಾಳಜಿ ಇದ್ದು, ಸದಾ ಅವರ ಜೊತೆಗಿರುತ್ತೇವೆ. ರೈತರ ಹಿತಾಸಕ್ತಿಯ ಬಗ್ಗೆ ಯೋಚಿಸುವ ನಮ್ಮ ಸರ್ಕಾರ, ಸದ್ಯದಲ್ಲೇ ರೈತರ ಜೊತೆಗೆ ಸಮಾಲೋಚನೆ ನಡೆಸಲಿದೆ' ಎಂದು ಹೇಳಿದ್ದರು.

ಈ ವಿಷಯವಾಗಿ ಸೋಷಿಯಲ್​ ಮೀಡಿಯಾದಲ್ಲಿ ಹಲವರು, ಸನ್ನಿ ಡಿಯೋಲ್​ ಅವರನ್ನು ಖಂಡಿಸಿದ್ದರು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅವರಿಗೆ ವೈ ಶ್ರೇಣಿ ಭದ್ರತೆಯನ್ನು ನೀಡಿದೆ.