ಮುಂಬೈ: ಅದ್ಯಾಕೋ ಗೊತ್ತಿಲ್ಲ, ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಮತ್ತು ಅಲ್ಲಿನ ಮಂದಿಯ ಬಗ್ಗೆ ಜನರಲ್ಲಿ ಒಂದು ರೀತಿಯ ಆಕ್ರೋಶ ಹೆಚ್ಚಾಗಿದ್ದು, ಪದೇಪದೇ 'ಬಾಯ್ಕಾಟ್ ಬಾಲಿವುಡ್' ಅಭಿಯಾನಗಳು ಕೇಳಿ ಬರುತ್ತಿವೆ. ಬಾಲಿವುಡ್ ಚಿತ್ರಗಳನ್ನು ಬಾಯ್ಕಾಟ್ ಮಾಡುವ ಬೆದರಿಕೆಗಳು ಹೆಚ್ಚಾಗಿವೆ. ಇದನ್ನು ತಡೆಯಲು ಸಹಾಯ ಮಾಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮನವಿ ಮಾಡಿದ್ದಾರೆ.
ಯೋಗಿ ಆದಿತ್ಯನಾಥ್ ಮುಂಬೈಗೆ ಎರಡು ದಿನಗಳ ಕಾಲ ಭೇಟಿ ನೀಡಿ, ಅಲ್ಲಿ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ಮಂದಿಯನ್ನೂ ಅವರು ಭೇಟಿ ಮಾಡಿದ್ದಾರೆ. ಈ ನಿಯೋಗದಲ್ಲಿ ಸುನೀಲ್ ಶೆಟ್ಟಿ, ಜಾಕಿ ಶ್ರಾಫ್, ಬೋನಿ ಕಪೂರ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಸುನೀಲ್ ಶೆಟ್ಟಿ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಬಗ್ಗೆ ದ್ವೇಷ ಹೆಚ್ಚಾಗುತ್ತಿದೆ. ಬಾಯ್ಕಾಟ್ ಮಾಡುವ ಬೆದರಿಕೆಗಳು ಬರುತ್ತಿವೆ. ನೀವು ಮನಸ್ಸು ಮಾಡಿದರೆ ಇವೆಲ್ಲವನ್ನೂ ನಿಲ್ಲಿಸಬಹುದು. ಇಷ್ಟಕ್ಕೂ ನಾವು ಮಾಡಿರುವ ತಪ್ಪಾದರೂ ಏನು. ನಾವು ಸಹ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲೂ ಒಳ್ಳೆಯ ಚಿತ್ರಗಳು ಬರುತ್ತಿವೆ. ಯಾರೋ ಒಬ್ಬರು ತಪ್ಪು ಮಾಡಿದರೆ, ಇಡೀ ಉದ್ಯಮವನ್ನು ಧೂಷಿಸುವುದು ತಪ್ಪಾಗುತ್ತದೆ. ಈ ಬಾಯ್ಕಾಟ್ ಅಭಿಯಾನದಿಂದ ಬಾಲಿವುಡ್ಗೆ ಕೆಟ್ಟ ಹೆಸರು ಬಂದಿದೆ. ಈ ಜಾಗ ಸರಿ ಇಲ್ಲ ಎಂದು ಜನ ತೀರ್ಮಾನಿಸುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಡಬೇಕಿದೆ. ಈ ಟ್ರೆಂಡ್ ಹೇಗೆ ನಿಲ್ಲಿಸಬೇಕು ಎಂದು ಎಲ್ಲರೂ ಯೋಚಿಸಬೇಕಿದೆ' ಎಂದಿದ್ದಾರೆ.
ಇದನ್ನೂ ಓದಿ: ‘ಆರಾಮ್ ಅರವಿಂದ್ ಸ್ವಾಮಿ’ಗೆ ಜತೆಯಾದ ಮಿಲನಾ ನಾಗರಾಜ್ …
ಈ ಕುರಿತು ಇನ್ನಷ್ಟು ಮಾತನಾಡಿರುವ ಅವರು, 'ನಾನು ಇವತ್ತು ಹೆಸರು ಮಾಡಿದ್ದರೆ, ಅದಕ್ಕೆ ಕಾರಣ ಉತ್ತರ ಪ್ರದೇಶ ಮತ್ತು ಅಲ್ಲಿಯ ಜನ ನನ್ನ ಆಕ್ಷನ್ ಚಿತ್ರಗಳಿಗೆ ತೋರಿಸಿದ ಪ್ರೀತಿ. ನೀವು ಮನಸ್ಸು ಮಾಡಿದರೆ, ಖಂಡಿತಾ ಈ ಅಭಿಯಾನವನ್ನು ನಿಲ್ಲಿಸಬಹುದು. ನಮ್ಮ ಮೇಲಿರುವ ಅಪವಾದ ಎನ್ನುವುದು ಕಿತ್ತು ಹಾಕಬಹುದು. ಚಿತ್ರರಂಗದಲ್ಲಿರುವವರೆಲ್ಲ ಇದೇ ರೀತಿ ಎಂಬ ಭಾವನೆಯನ್ನು ಬಿತ್ತಲಾಗುತ್ತಿದೆ. ಇಲ್ಲಿ ಯಾರೂ ದಿನ ಪೂರಾ ಡ್ರಗ್ಸ್ ತೆಗೆದುಕೊಳ್ಳುತ್ತಾ ಕೂರುವುದಿಲ್ಲ. ನಾವು ಸಹ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇವೆ' ಎಂದಿದ್ದಾರೆ.