ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾದ 'ಫಿಸಿಕ್ಸ್ ಟೀಚರ್' ಚಿತ್ರದ ಮೂಲಕ ನಟ-ನಿರ್ದೇಶಕನಾಗಿ ಗುರುತಿಸಿಕೊಂಡ ಸುಮುಖ, ಈಗ ಸದ್ದಿಲ್ಲದೆ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಎರಡನೆಯ ಹಂತದ ಚಿತ್ರೀಕರಣ ಶುರುವಾಗಲಿದೆ. ಅಂದಹಾಗೆ, ಚಿತ್ರದ ಹೆಸರು 'ಚಾಕೊಲೇಟ್ ಬಾಯ್'.
'ಚಾಕೊಲೇಟ್ ಬಾಯ್' ಚಿತ್ರದಲ್ಲಿ ಸುಮುಖ ಬರೀ ನಟನಾಗಿ ಕಾಣಿಸಿಕೊಂಡಿದ್ದು, ಚಿತ್ರವನ್ನು ಉದಯ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಸುಮುಖ ಜತೆಗೆ ಶೈನ್ ಶೆಟ್ಟಿ ಮತ್ತು ನಿಧಿ ಹೆಗಡೆ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಸ್ನೇಹ ಮತ್ತು ಸಹೋದರತ್ವ ಸಾರುವ ಚಿತ್ರವಂತೆ ಅದು.
ಹೆಸರೇ ಹೇಳುವಂತೆ ಇದರಲ್ಲಿ ಚಾಕೊಲೇಟ್ ಬಾಯ್ ಆಗಿ ಸುಮುಖ ಕಾಣಿಸಿಕೊಳ್ಳುತ್ತಿದ್ದು, ಉತ್ಸಾಹಿ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಸಕಲೇಶಪುರದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತ ಚಿತ್ರಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ. ಅಕ್ಷಯ್ ಶೆಟ್ಟಿ ಜತೆಗೂಡಿ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ ನಿರ್ದೇಶಕ ಉದಯ್ ಶೆಟ್ಟಿ.
'ಚಾಕೊಲೇಟ್ ಬಾಯ್' ಅಲ್ಲದೆ ಕನ್ನಡ ಹಾಗೂ ಮರಾಠಿಯಲ್ಲಿ ನಿರ್ಮಾಣವಾಗಿರುವ 'ರಾಜಸ್ಥಾನ ಡೈರೀಸ್'ನಲ್ಲೂ ಸಮುಖ ನಾಯಕನಾಗಿ ಕಾಣಿಸಿಕೊಂಡಿದ್ದು, ಇದರಲ್ಲಿ ಅವರಿಗೆ ನಾಯಕಿಯಾಗಿ ಮಾನ್ವಿತಾ ಕಾಮತ್ ಅಭಿನಯಿಸಿದ್ದಾರೆ. ಸುಮುಖ ಅವರ ತಾಯಿ ನಂದಿತಾ ಯಾದವ್ ಚಿತ್ರಕಥೆ ಬರೆದು, ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.