ಸಿನಿವಾಣಿ

ಬಾಲಿವುಡ್​ನ ದೊಡ್ಡ ದೊಡ್ಡ ಹೆಸರುಗಳು ಸುಶಾಂತ್​ ಸಾವನ್ನು ಮುಚ್ಚಿಹಾಕಲು ಯತ್ನಿಸುತ್ತಿವೆ

ಸುಶಾಂತ್​ ಸಿಂಗ್​ ರಜಪೂತ್​ ಇಲ್ಲವಾಗಿ ತಿಂಗಳ ಮೇಲಾಯಿತು. ಇಂದಿಗೂ ಅವರ ಸಾವು ಆತ್ಮಹತ್ಯೆಯೋ, ವ್ಯವಸ್ಥಿತ ಕೊಲೆಯೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಒಂದಷ್ಟು ಬಲವಾದ ಕಾರಣಗಳು ಸಿಕ್ಕಿವೆಯಾದರೂ, ಅವುಗಳನ್ನು ಪೊಲೀಸ್​ ಇಲಾಖೆ ಹೊರಗೆಡುವುತ್ತಿಲ್ಲ ಎಂಬ ಮಾತೂ ಕೇಳಿಬರುತ್ತಿದೆ. ಮತ್ತೊಂದೆಡೆ ಸಾಕಷ್ಟು ಮಂದಿ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆಯೂ ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೇ ಬಿಹಾರದ ಎಂಪಿಯೊಬ್ಬರು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಅದೇ ರೀತಿ ಇದೀಗ ಮಾಜಿ ಕೇಂದ್ರ ಸಚಿವ ಡಾ. ಸುಬ್ರಮಣಿಯನ್​ ಸ್ವಾಮಿ ಸಹ ಅದೇ ಮಾತನ್ನು ಹೇಳಿದ್ದಾರೆ.

ಪ್ರಕರಣದ ಸಂಬಂಧ ಇತ್ತೀಚೆಗಷ್ಟೇ ಖುದ್ದು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸುಬ್ರಮಣಿಯನ್​ ಸ್ವಾಮಿ, ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಪತ್ರದಲ್ಲಿ ನಮೂದಿಸಿದ್ದಾರೆ.

ಬಾಲಿವುಡ್​ನ ದೊಡ್ಡ ದೊಡ್ಡ ಹೆಸರುಗಳು ಈ ಪ್ರಕರಣದಲ್ಲಿವೆ. ಆ ಹೆಸರುಗಳು ತಮ್ಮ ಹೆಸರುಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿವೆ. ಹಾಗಾಗಿ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ತನಿಖೆ ಮೂಲಕವೇ ಬಗೆಹರಿಸಬೇಕಿದೆ. ಈ ಪ್ರಕರಣವನ್ನು ಸಿಬಿಐಗೆ ನೀಡಿ ಎಂದು ಕೋರಿದ್ದಾರೆ.

ಅದೇ ರೀತಿ ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ಸಹ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿ ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ. ‘ಸುಶಾಂತ್ ನಿಧನರಾಗಿ ಒಂದು ತಿಂಗಳಾಗಿದೆ. ಸುಶಾಂತ್ ಯಾಕೆ ಆತ್ಮಹತ್ಯೆ ಮಾಡಿಕೊಂಡರು, ಅವರಿಗೆ ಏನೆಲ್ಲಾ ಒತ್ತಡಗಳಿದ್ದವು ಎಂದು ತಿಳಿಯಬೇಕಿದೆ. ಅವರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎಂದು ಕೈ ಮುಗಿದು ಪ್ರಾರ್ಥಿಸುತ್ತೇನೆ’ ಎಂದು ಅವರು ಮನವಿ ಮಾಡಿದ್ದರು. (ಏಜೆನ್ಸೀಸ್​)