ಸಿನಿವಾಣಿ

ಕಿವಿ ಕೇಳಿಸಲ್ಲ, ಮಾತು ಆಡಲು ಬರಲ್ಲ; ಸ್ಟಂಟ್​ ಮಾಸ್ಟರ್ ರವಿ ವರ್ಮಾಗೇನಾಯ್ತು?

manjunathktgns

ಸಾಹಸ ನಿರ್ದೇಶಕ ರವಿ ವರ್ಮಾ ಕನ್ನಡದ ಜತೆಗೆ ಪರಭಾಷೆಗಳಲ್ಲಿಯೂ ಗುರುತಿಸಿಕೊಂಡ ಸ್ಟಂಟ್​ ಮಾಸ್ಟರ್​. ಟಾಲಿವುಡ್​, ಕಾಲಿವುಡ್​ ಮಾತ್ರವಲ್ಲದೆ ಬಾಲಿವುಡ್​ನಲ್ಲಿಯೂ ತಮ್ಮ ಪ್ರತಿಭೆ ತೋರಿಸಿ ಬಂದಿದ್ದಾರೆ. ಆಗೊಂದು ಈಗೊಂದು ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೂ ಉಂಟು. ಆದರೆ, ಪೂರ್ಣ ಪ್ರಮಾಣದ ನಟನಾಗಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದೀಗ ಆ ಕೆಲಸಕ್ಕೆ ಕೈ ಹಾಕಿದ್ದಾರೆ.

ಈಗಾಗಲೇ ರುಸ್ತುಂ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿರುವ ರವಿವರ್ಮಾ, ಆರ್​ಜೆ ರೋಹಿತ್​ ನಾಯಕತ್ವದ ಮತ್ತು ನಿರ್ದೇಶನದ ‘ರೌಡಿ ಫೆಲೋ’ ಸಿನಿಮಾದಲ್ಲಿ ವಿಶೇಷ ಪಾತ್ರವೊಂದಕ್ಕೆ ರವಿವರ್ಮಾ ಬಣ್ಣಹಚ್ಚಿದ್ದಾರೆ. ಮಾತು ಬಾರದ, ಕಿವಿ ಕೇಳಿಸದ ವ್ಯಕ್ತಿಯಾಗಿ ರವಿವರ್ಮಾ ಕಾಣಿಸಿಕೊಂಡಿದ್ದು, ವಿಲನ್​ ಅವತಾರ ಎತ್ತಿದ್ದಾರೆ. ಮೊದಲಿಂದಲೂ ರವಿವರ್ಮಾ ಮತ್ತು ರೋಹಿತ್​ ನಡುವೆ ಉತ್ತಮ ಬಾಂಧವ್ಯ ಇದೆ. ಅದೀಗ ಸಿನಿಮಾದಲ್ಲಿಯೂ ಮುಂದುವರಿಯುತ್ತಿದೆ.

ಈಗಾಗಲೇ ರೌಡಿ ಫೆಲೋ ಸಿನಿಮಾದಲ್ಲಿನ ತಮ್ಮ ಪಾಲಿನ ಶೂಟಿಂಗ್​ ಮುಗಿಸಿಕೊಂಡಿರುವ ರವಿವರ್ಮಾ, ಸ್ಟಂಟ್​ ಮಾಸ್ಟರ್ ಜತೆಗೆ ನಿರ್ದೇಶನದಲ್ಲಿಯೂ ಅವರಿಗೆ ಆಸಕ್ತಿ ಇರುವ ಹಿನ್ನೆಲೆಯಲ್ಲಿ ಒಂದಷ್ಟು ಕಥೆಗಳನ್ನೂ ಸಿದ್ಧಪಡಿಸಿದ್ದಾರೆ. ಶೀಘ್ರದಲ್ಲಿ ಮತ್ತೆ ನಿರ್ದೇಶನಕ್ಕೆ ಮರಳುವ ಸೂಚನೆಯನ್ನೂ ನೀಡಿದ್ದಾರೆ.

ಇನ್ನು ರೌಡಿ ಫೆಲೋ ಚಿತ್ರದ ಸ್ಕ್ರಿಪ್ಟ್‌ ಕೆಲಸಕ್ಕೆ 'ಕೆಜಿಎಫ್‌' ನಿರ್ದೇಶಕ ಪ್ರಶಾಂತ್‌ ನೀಲ್‌ ಸಾಥ್ ನೀಡಿದ್ದು ವಿಶೇಷ. ಲವಿತ್‌ ಛಾಯಾಗ್ರಹಣ, ನಕುಲ್‌ ಅಭ್ಯಂಕರ್‌ ಸಂಗೀತ ಸಂಯೋಜನೆ, ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.