ಸಿನಿವಾಣಿ

ಕಥೆಯೇ ಇಲ್ಲಿ ಹೀರೋ!; ಏ.29ಕ್ಕೆ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ

Webdesk - Ravikanth

ಬೆಂಗಳೂರು: ದಿಗಂತ್. ಐಂದ್ರಿತಾ ರೇ ಮತ್ತು ‘ಕನ್ನಡತಿ’ ರಂಜನಿ ರಾಘವನ್ ಅಭಿನಯದ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಚಿತ್ರೀಕರಣ ಮುಗಿದೇ ಬಹಳ ಸಮಯವಾಗಿದೆ. ಆದರೆ, ಕರೊನಾ ಗೊಂದಲದ ನಡುವೆ ಚಿತ್ರ ಸ್ವಲ್ಪ ತಡವಾಗಿದ್ದು, ನಾಡಿದ್ದು ಶುಕ್ರವಾರ (ಏ.29) ಚಿತ್ರ ಬಿಡುಗಡೆಯಾಗಲಿದೆ. ಚಿತ್ರದ ಬಗ್ಗೆ ಮಾತನಾಡುವುದಕ್ಕೆ ಚಿತ್ರತಂಡದವರೆಲ್ಲೂ ಒಂದೆಡೆ ಸೇರಿದ್ದರು. ಎಲ್ಲರೂ ಚಿತ್ರ ರೂಪುಗೊಂಡಿರುವ ಬಗ್ಗೆ ಸಾಕಷ್ಟು ಮಾತನಾಡಿದರು.

ಎಲ್ಲರ ಪ್ರಕಾರ, ಇಲ್ಲಿ ಕಥೆಯೇ ಹೀರೋ ಅಂತೆ. 10 ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ನಿರ್ವಪಕ ಮಂಜು ಕಥೆ ಕೇಳಿಯೇ, ಚಿತ್ರ ನಿರ್ವಿುಸುವುದಕ್ಕೆ ಮುಂದೆ ಬಂದರಂತೆ. ಇನ್ನು, ದಿಗಂತ್ ಸಹ ಕಥೆ ಮೆಚ್ಚಿಕೊಂಡು ನಟಿಸುವುದಕ್ಕೆ ಒಪ್ಪಿಕೊಂಡರಂತೆ. ‘ಮಧ್ಯಮ ವರ್ಗದ ಜನರ ಬಳಿ ತಿಂಗಳ ಕೊನೆಗೆ ದುಡ್ಡು ಉಳಿದಿರುವುದಿಲ್ಲ. ಈ ವಿಷಯವನ್ನಿಟ್ಟುಕೊಂಡು ನಿರ್ವಣವಾಗಿರುವ ಚಿತ್ರವಿದು. ಮಲೆನಾಡ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ. ಈ ಕಥೆಯನ್ನು ಜನ ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ’ ಎನ್ನುತ್ತಾರೆ ದಿಗಂತ್.

ಐಂದ್ರಿತಾಗೆ ಇಲ್ಲಿ ಲಾಯರ್ ಪಾತ್ರ ಸಿಕ್ಕಿದೆ. ‘ಬಹಳ ವರ್ಷಗಳ ನಂತರ ನಾನು ದಿಗಂತ್ ಒಟ್ಟಿಗೆ ನಟಿಸಿದ್ದೇವೆ. ಈ ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ. ನೋಡಿ ಹರಸಿ’ ಎನ್ನುತ್ತಾರೆ ಐಂದ್ರಿತಾ.

ನಿರ್ದೇಶಕ ವಿನಾಯಕ ಕೊಡ್ಸರ ಹೆಚ್ಚು ಮಾತನಾಡಲಿಲ್ಲ. ‘ಟ್ರೇಲರ್ ಹಾಗೂ ಹಾಡು ಜನರಿಗೆ ಇಷ್ಟವಾಗಿದೆ. ಹೆಚ್ಚು ಹೇಳುವುದೇನಿಲ್ಲ. ನೋಡಿ ಹರಸಿ’ ಎಂದರು. ಈ ಚಿತ್ರಕ್ಕೆ ಪ್ರಜ್ವಲ್ ಪೈ ಸಂಗೀತ ಮತ್ತು ನಂದಕಿಶೋರ್ ಅವರ ಛಾಯಾಗ್ರಹಣವಿದೆ.