ಸಿನಿವಾಣಿ

ಟಾಲಿವುಡ್​ ವಕೀಲ್ ಸಾಬ್​ಗೆ ನಾಯಕಿ ಸಿಕ್ರು ನೋಡಿ

ಟಾಲಿವುಡ್​ನಲ್ಲಿ ಸದ್ಯ ಪವನ್​ ಕಲ್ಯಾಣ್​ ಅವರ ಸಿನಿಮಾದ್ದೇ ಸುದ್ದಿ. ಚಿತ್ರದ ಫಸ್ಟ್ ಲುಕ್​ ಬಿಡುಗಡೆ ಆದ ಮೇಲಂತೂ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿತ್ತು. ಅದರಲ್ಲೂ ಇದು ಅಮಿತಾಬ್​ ಬಚ್ಚನ್​ ಮಾಡಿದ್ದ ಪಿಂಕ್​ ಚಿತ್ರದ ರಿಮೇಕ್​ ಎಂದಾಗಲೂ ಪ್ರೇಕ್ಷಕರು ಅಚ್ಚರಿಯಿಂದಲೇ ನೋಡಿದ್ದರು. ತೆಲುಗಿನಲ್ಲಿ ಈ ಸಿನಿಮಾ ಯಾವ ರೀತಿ ಮೂಡಿಬರಬಹುದು ಎಂಬ ಕುತೂಹಲ ಮೂಡಿತ್ತು. ಹೀಗಿರುವಾಗಲೇ ಚಿತ್ರಕ್ಕೆ ಇದೀಗ ನಾಯಕಿ ಆಯ್ಕೆ ಆಗಿರುವ ವಿಚಾರ ಹೊರಬಿದ್ದಿದೆ.

ಹೌದು, ಮೂಲ ಸಿನಿಮಾದಲ್ಲಿ ನಾಯಕಿ ಅನ್ನೋ ಪರಿಕಲ್ಪನೆಯೇ ಇಲ್ಲ. ತಮಿಳಿನಲ್ಲಿಯೂ ಅಜಿತ್​ ನಟಿಸಿದ ನೆರ್ಕೊಂಡ ಪಾರವೈ ಸಿನಿಮಾದಲ್ಲಿಯೂ ನಾಯಕಿ ಇರಲಿಲ್ಲ. ಇದೀಗ ಟಾಲಿವುಡ್​ನಲ್ಲಿ ನಾಯಕ ಪವನ್​ ಕಲ್ಯಾಣ್​ಗೆ ನಾಯಕಿಯಾಗಿ ಶ್ರುತಿ ಹಾಸನ್​ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತ ಮಾಡಿಲ್ಲವಾದರೂ, ಇತ್ತೀಚೆಗಷ್ಟೇ ಶ್ರುತಿ ಹಾಸನ್​ ಸಂದರ್ಶನವೊಂದರಲ್ಲಿ ತಾವು ಸಿನಿಮಾದಲ್ಲಿ ನಟಿಸುವ ಬಗ್ಗೆ ಸಣ್ಣ ಸುಳಿವು ನೀಡಿದ್ದರು. ಆದರೆ, ಅವರ ಪಾತ್ರ ಹೇಗಿದೆ ಎಂಬುದನ್ನು ಮಾತ್ರ ಎಲ್ಲಿಯೂ ರಿವೀಲ್​ ಮಾಡಿರಲಿಲ್ಲ.

ಇನ್ನೇನು ಶೂಟಿಂಗ್​ಗೆ ತಯಾರಿ ಮಾಡಿಕೊಳ್ಳುತ್ತಿರುವ ‘ವಕೀಲ್​ ಸಾಬ್’ ಚಿತ್ರತಂಡ, ಕರೊನಾ ಹಿನ್ನೆಲೆಯಲ್ಲಿ ಚಿತ್ರೀಕರಣಕ್ಕೆ ಬ್ರೇಕ್​ ಹಾಕಿದೆ. ಸೆಪ್ಟಂಬರ್​ನಿಂದ ಶೂಟಿಂಗ್​ಗೆ ತೆರೆಳಲು ಪ್ಲ್ಯಾನ್​ ಹಾಕಿದೆ. ವೇಣು ಶ್ರೀರಾಮ್​ ನಿರ್ದೇಶನ ಮಾಡಲಿದ್ದು, ದಿಲ್​ ರಾಜು ಮತ್ತು ಬೋನಿ ಕಪೂರ್​ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. (ಏಜೆನ್ಸೀಸ್​)