ಹೈದರಾಬಾದ್: ಕೆಜಿಎಫ್ ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ನಟ ಪ್ರಭಾಸ್ ಅಭಿನಯದ “ಸಲಾರ್” ಸಿನಿಮಾ ಡಿ.22ರಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲಿದೆ. ಚಿತ್ರ ಬಿಡುಗಡೆಗೆ ಇನ್ನೂ ಆರೇ ದಿನ ಬಾಕಿ ಇದೆ. ಹೀಗಾಗಿ ಚಿತ್ರತಂಡ ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಸಿನಿ ಅಭಿಮಾನಿಗಳು ಕೂಡ ಕಾತರದಿಂದ ಎದುರು ನೋಡುತ್ತಿದ್ದಾರೆ.
ಸಲಾರ್ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ಸಲಾರ್ ಸೀಸ್ಫೈರ್ ಹೆಸರಿನಲ್ಲಿ ತೆರೆಗೆ ಅಪ್ಪಳಿಸಲಿದೆ. ಈಗಾಗಲೇ ಟ್ರೈಲರ್ನಿಂದ ಸದ್ದು ಮಾಡಿರುವ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವ ಲಕ್ಷಣಗಳು ಕಾಣುತ್ತಿದೆ. ಅಲ್ಲದೆ, ಬಾಹುಬಲಿ ಬಳಿಕ ಸತತ ಸೋಲುಗಳನ್ನು ಅನುಭವಿಸಿರುವ ಪ್ರಭಾಸ್ಗೆ ಈ ಸಿನಿಮಾ ಒಂದೊಳ್ಳೆ ಕಮ್ಬ್ಯಾಕ್ ಆಗುವ ಸಾಧ್ಯತೆ ಇದೆ. ಅಂದಹಾಗೆ ಸಲಾರ್ ಸಿನಿಮಾ ಎರಡು ಬಾರಿ ಪೋಸ್ಟ್ಪೋನ್ ಆಗಿದ್ದು, ಅಂತಿಮವಾಗಿ ತೆರೆಗೆ ಅಪ್ಪಳಿಸುತ್ತಿದೆ. ಕೆಜಿಎಫ್ ಕಾರಣದಿಂದಾಗಿ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇದೆ. ಆದರೆ, ಸಿನಿಮಾ ತಂಡ ಈವರೆಗೂ ಯಾವುದೇ ಪ್ರೆಸ್ಮೀಟ್ ಮಾಡಿಲ್ಲ ಮತ್ತು ಪ್ರಚಾರವನ್ನು ಆರಂಭಿಸಿಲ್ಲ. ಇದಿಷ್ಟೇ ಅಲ್ಲದೆ, ಒಂದೇ ಒಂದು ಸಂದರ್ಶನವನ್ನೂ ಈವರೆಗೆ ನೀಡಿಲ್ಲ. ಇದು ಅಭಿಮಾನಿಗಳಲ್ಲಿ ನಿರಾಸೆ ಉಂಟು ಮಾಡಿದೆ.
ಸಲಾರ್ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಇರುವುದಿಲ್ಲ ಎನ್ನಲಾಗಿದೆ. ಈಗಾಗಲೇ ಪ್ರಭಾಸ್, ಪ್ರಶಾಂತ್ ನೀಲ್, ಪೃಥ್ವಿರಾಜ್ ಸುಕುಮಾರನ್ ಅವರ ಸಂದರ್ಶನ ನೀಡಿದ್ದು, ಆ ಸಂದರ್ಶನ ಶೀಘ್ರದಲ್ಲೇ ಕಿರುತೆರೆ ಮೇಲೆ ಪ್ರದರ್ಶನವಾಗಲಿದೆ. ಅಲ್ಲದೇ ಭಾನುವಾರ ತೆಲುಗು ಮಾಧ್ಯಮದವರೊಂದಿಗೆ ನಿರ್ದೇಶಕ ಪ್ರಶಾಂತ್ ನೀಲ್ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಸಿನಿಮಾದ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಇದರ ನಡುವೆ ಸಲಾರ್ ಚಿತ್ರದ ಮೊದಲ ಟಿಕೆಟ್ ಅನ್ನು ಕನ್ನಡಿಗನೊಬ್ಬ ಖರೀದಿಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಆ ಕನ್ನಡಿಗ ಯಾರೆಂದರೆ ಸ್ಟಾರ್ ನಿರ್ದೇಶಕ ರಾಜಮೌಳಿ. ಅವರೇ ಹೇಳಿಕೊಂಡಂತೆ ರಾಜಮೌಳಿ ಅವರ ಮೂಲಕ ಕರ್ನಾಟಕದ ರಾಯಚೂರು. ಟಾಲಿವುಡ್ನಲ್ಲಿ ತಮ್ಮ ನಿರ್ದೇಶನದ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಮಗಧೀರ, ಈಗ, ಬಾಹುಬಲಿ ಮತ್ತು ಆರ್ಆರ್ಆರ್ ಸಿನಿಮಾಗಳು ಜಾಗತಿಕ ಮನ್ನಣೆ ಗಳಿಸಿರುವುದು ನಿಮಗೆಲ್ಲ ಗೊತ್ತೇ ಇದೆ. ಪ್ರಭಾಸ್ಗೆ ಪ್ಯಾನ್ ಇಂಡಿಯಾ ಖ್ಯಾತಿ ತಂದುಕೊಟ್ಟಿದ್ದೆ ರಾಜಮೌಳಿ. ಇದೀಗ ಸಲಾರ್ ಚಿತ್ರದ ಬಿಡುಗಡೆಗೂ ಮುನ್ನ ರಾಜಮೌಳಿರುವ ಮೊದಲ ಟಿಕೆಟ್ ಖರೀದಿ ಮಾಡಿದ್ದಾರೆಂದು ತಿಳಿದುಬಂದಿದೆ.
ವಿಶೇಷ ಸಂದರ್ಶನದಲ್ಲಿ ಪ್ರಭಾಸ್, ಪ್ರಶಾಂತ್ ನೀಲ್, ಪೃಥ್ವಿರಾಜ್ ಸುಕುಮಾರನ್ ಹಾಗೂ ರಾಜಮೌಳಿ ಭಾಗಿಯಾಗಿದ್ದು, ಸಲಾರ್ ಚಿತ್ರದ ಟಿಕೆಟ್ ಹಿಡಿದು ಚಿತ್ರತಂಡದೊಂದಿಗೆ ರಾಜಮೌಳಿ ಪೋಸ್ ನೀಡಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಭಾಸ್ ಹೊರತುಪಡಿಸಿ, ನಾಯಕಿಯಾಗಿ ಶ್ರುತಿ ಹಾಸನ್, ನಟ ಜಗಪತಿ ಬಾಬು, ಈಶ್ವರಿ ರಾವ್, ಶ್ರಿಯಾ ರೆಡ್ಡಿ, ಪೃಥ್ವಿರಾಜ್ ಸುಕುಮಾರ್ ಮತ್ತು ತಿನ್ನು ಆನಂದ್ ಸೇರಿದಂತೆ ಬಹುತಾರಾಗಣವೇ ಈ ಚಿತ್ರದಲ್ಲಿದೆ. ದೊಡ್ಡ ಬಜೆಟಿನ ಚಿತ್ರವಾಗಿದ್ದು, ಕೆಜಿಎಫ್ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಿಸಿದೆ. ರವಿ ಬಸ್ರೂರ್ ಅವರೇ ಸಲಾರ್ಗೂ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್)