More

    ಆದಾಯದ ಮೇಲೆ ಶಬರಿಮಲೆ ಅವ್ಯವಸ್ಥೆಯ ಕರಿನೆರಳು! ಹಣಗಳಿಕೆಯಲ್ಲಿ ಭಾರಿ ಇಳಿಕೆ, ನಷ್ಟದ ಮೊತ್ತವೆಷ್ಟು?

    ಪಟ್ಟಣಂತಿಟ್ಟ: ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆಯ ಆದಾಯದಲ್ಲಿ ಭಾರಿ ಕುಂಠಿತವಾಗಿದೆ. ಜನಸಂದಣಿ ನಿಯಂತ್ರಿಸುವಲ್ಲಿ ಸಮಸ್ಯೆ, ಅವ್ಯವಸ್ಥೆಗಳು ಮತ್ತು ಮಂಡಲ ಸೀಸನ್​ ಆರಂಭದಲ್ಲೇ ಮಳೆಯ ಹೊಡೆತದಿಂದ ಭಕ್ತರ ಸಂಖ್ಯೆ ಕಡಿಮೆಯಾಗಿರುವುದರಿಂದ ಶಬರಿಮಲೆ ಆದಾಯಕ್ಕೆ ಕತ್ತರಿ ಬಿದ್ದಿದೆ. ಮಂಡಲ ಯಾತ್ರೆಯು 28 ದಿನ ಪೂರೈಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬರೋಬ್ಬರಿ 20 ಕೋಟಿ ರೂ. ಆದಾಯ ನಷ್ಟವಾಗಿದೆ.

    ಸದ್ಯ ಶಬರಿಮಲೆಯಲ್ಲಿ ಒಂದೂವರೆ ಲಕ್ಷ ಯಾತ್ರಿಗಳಿದ್ದಾರೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಇದು ಕಡಿಮೆ ಪ್ರಮಾಣವಾಗಿದ್ದು, ನಾಣ್ಯದ ಆದಾಯ ಮತ್ತು ಅಪ್ಪಂ ಹಾಗೂ ಅರವಣ ಮಾರಾಟದ ಮೇಲೆ ಪರಿಣಾಮ ಬೀರಿದೆ. ಇಲ್ಲಿಯವರೆಗೆ 134.44 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿ ಇದೇ ಸಮಯಕ್ಕೆ 154.77 ಕೋಟಿ ರೂ. ಸಂಗ್ರಹವಾಗಿತ್ತು.

    ಚೆನ್ನೈ ಪ್ರವಾಹ
    ಭಕ್ತಾದಿಗಳ ಪ್ರಮಾಣದಲ್ಲಿ ಭಾರಿ ಇಳಿಕೆಗೆ ಮಿಚೌಂಗ್​ ಸೈಕ್ಲೋನ್​ನಿಂದ ಚೆನ್ನೈನಲ್ಲಿ ಸೃಷ್ಟಿಯಾದ ಪ್ರವಾಹವೇ ಕಾರಣ ಎಂದು ಅಯ್ಯಪ್ಪ ಸ್ವಾಮಿ ದೇವಸ್ವಂ ಮಂಡಳಿ ಕಾರಣ ನೀಡಿದೆ. ಕೆಲ ದಿನಗಳವರೆಗೆ ಭಾರಿ ಮಳೆ ಇದ್ದಿದ್ದರಿಂದ ಭಕ್ತರ ಸಂಖ್ಯೆ ಇಳಿಕೆಯಾಗಿದೆ ಎಂದಿದೆ. ಆದರೆ, ಇದು ಸರಿಯಾದ ಸಮರ್ಥನೆಯಲ್ಲ. ಏಕೆಂದರೆ, ಶಬರಿಮಲೆಗೆ ತಮಿಳುನಾಡಿನಿಂದ ಮಾತ್ರ ಯಾತ್ರಿಗಳು ಬರುವುದಿಲ್ಲ. ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಮಂದಿಗೆ ಚಂಡಮಾರುತ ಅಷ್ಟೊಂದು ಪರಿಣಾಮ ಬೀರಲಿಲ್ಲ.

    ಶಬರಿಮಲೆಯ ಅವ್ಯವಸ್ಥೆ
    ಕಳೆದ ವಾರವಷ್ಟೇ ಜನ ದಟ್ಟಣೆಯಿಂದ ಯಾತ್ರಾರ್ಥಿಗಳು ಶಬರಿಮಲೆಯಲ್ಲಿ ಪರದಾಡಿದಾರು. ಊಟ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ತುಂಬಾ ಕಷ್ಟಗಳನ್ನು ಅನುಭವಿಸಿದರು. ಜನದಟ್ಟಣೆಯಲ್ಲಿ ತನ್ನ ತಂದೆಗಾಗಿ ಹುಡುಕುತ್ತಾ, ಪೊಲೀಸ್​ ಅಧಿಕಾರಿಯೊಬ್ಬರ ಮುಂದೆ ಪುಟ್ಟ ಬಾಲಕನೊಬ್ಬ ತನ್ನ ತಂದೆಗಾಗಿ ಕೈಮುಗಿದ ದೃಶ್ಯ ಎಲ್ಲರ ಹೃದಯಸ್ಪರ್ಶಿಸಿದ್ದಲ್ಲದೆ, ಶಬರಿಮಲೆಯ ಅವ್ಯವಸ್ಥೆಯನ್ನು ಹೊರಗೆಳೆಯಿತು. ಅನೇಕರಿಗೆ ಅಲ್ಲಿಂದ ಹೊರಟು ಬಂದರೆ ಸಾಕು ಎನಿಸಿತು. ಅಲ್ಲಿನ ಅವ್ಯವಸ್ಥೆಯನ್ನು ಕಂಡು ಕೇರಳ ಹಕೋರ್ಟ್​ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ಘಟನೆಯ ಬಳಿಕ ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಅಸಲಿ ಸಂಗತಿಯಾಗಿದೆ. ಅನೇಕ ಭಕ್ತರು ಹದಿನೆಂಟು ಮೆಟ್ಟಿಲನ್ನು ಏರಲಾಗದೇ ಪಂದಳಂನಲ್ಲಿ ತುಪ್ಪದ ಅಭಿಷೇಕವನ್ನು ಮಾಡಿ ದೇವರ ದರ್ಶನವಿಲ್ಲದೆ, ನೋವಿನಿಂದಲೇ ಹಿಂತಿರುಗಿದರು. ಇದನೆಲ್ಲ ನೋಡಿದ ಹೈಕೋರ್ಟ್​ ಭಕ್ತರ ಸಂಖ್ಯೆ ಒಂದು ದಿನಕ್ಕೆ 90 ಸಾವಿರ ಮೀರಬಾರದು ಎಂದು ಆದೇಶ ಹೊರಡಿಸಿದೆ. ಇನ್ನೂ ಕಳೆದ ಮೂರು ದಿನಗಳಿಂದ ದರ್ಶನಕ್ಕೆ ಬಂದವರಲ್ಲಿ ಹೆಚ್ಚಿನವರು ಮಲಯಾಳಿಗಳು. ಯಾತ್ರಾರ್ಥಿಗಳಿಗೆ ಮೂಲಸೌಕರ್ಯ ಮತ್ತು ಸುರಕ್ಷಿತ ದರ್ಶನ ನೀಡುವಂತೆ ತಮಿಳುನಾಡು ಸರ್ಕಾರ ಕೇರಳ ಸರ್ಕಾರಕ್ಕೆ ಪತ್ರ ಬರೆದಿದೆ.

    ಹಿನ್ನಡೆ ಏನು?
    1. ಶಬರಿಮಲೆಯ 18 ಮೆಟ್ಟಿಲುಗಳ ಬಳಿ ಅನುಭವಿ ಪೊಲೀಸರನ್ನು ನಿಯೋಜಿಸುವಲ್ಲಿ ವಿಫಲವಾಗಿದ್ದು, ಭಕ್ತರ ಸರಾಗ ಚಲನೆಯ ಮೇಲೆ ಭಾರಿ ಪರಿಣಾಮ ಬೀರಿತು.
    2. ದೇವರ ದರ್ಶನ ಪಡೆಯಲು ಭಕ್ತರು 18 ಗಂಟೆಗಳ ಕಾಲ ಸುದೀರ್ಘವಾಗಿ ಸಾಲಿನಲ್ಲಿ ನಿಲ್ಲಬೇಕಾಯಿತು. ಇದರಿಂದ ಮಕ್ಕಳು ಮತ್ತು ಮಹಿಳೆಯರು ಪರದಾಡಿದರು.
    3. ಸರಿಯಾಗಿ ಆಹಾರ ಮತ್ತು ನೀರು ಸಿಗದೆ ಅರಣ್ಯ ರಸ್ತೆಯಲ್ಲಿ ಗಂಟೆಗಟ್ಟಲೆ ವಾಹನಗಳು ನಿಂತಿದ್ದವು.
    4. ನಿಲಕ್ಕಲ್​​ನಲ್ಲಿ ಪಾರ್ಕಿಂಗ್ ವ್ಯವಸ್ಥೆ ವಿಫಲವಾಗಿದೆ. ಕೆಎಸ್‌ಆರ್‌ಟಿಸಿ ಸರಣಿ ಸೇವೆ ಸೇರಿದಂತೆ ಬಸ್‌ ಸಂಚಾರವೂ ಸಹ ಸ್ಥಗಿತಗೊಂಡಿದೆ.

    ಬುಕ್ಕಿಂಗ್​ ತೆರವಿಗಾಗಿ ಕೋರ್ಟ್​ ಮೆಟ್ಟಿಲು
    ಮಂಡಲ ಅವಧಿ ಅರ್ಧ ಮುಗಿದಿದ್ದು, ಅಪಾರ ಜನಸ್ತೋಮವು ಸಹ ಕಡಿಮೆಯಾಗುವ ಹಂತಕ್ಕೆ ಬಂದಿದೆ. ಆದರೆ, ಈ ಬಾರಿ 80,000ಕ್ಕೆ ನಿಗದಿಪಡಿಸಿದ ವರ್ಚುವಲ್ ಕ್ಯೂ ಬುಕಿಂಗ್ ಮತ್ತು 10,000 ರೂ.ಗೆ ಸ್ಪಾಟ್ ಬುಕಿಂಗ್ ಮಾಡುವುದರಿಂದ ಆದಾಯ ನಷ್ಟವಾಗುತ್ತದೆ ಎಂದು ದೇವಸ್ವಂ ಮಂಡಳಿ ಆತಂಕ ವ್ಯಕ್ತಪಡಿಸಿದೆ. ಸಂಚಾರ ನಿಯಂತ್ರಣಕ್ಕೆ ಅನುಭವಿ ಪೊಲೀಸರನ್ನು ನೇಮಿಸಿದ್ದರಿಂದ ನಾಲ್ಕು ದಿನಗಳಿಂದ ಸುಗಮ ದರ್ಶನ ಸಾಧ್ಯವಾಗಿದೆ. 18 ಮೆಟ್ಟಿಲು ಹತ್ತುವವರ ಸಂಖ್ಯೆ ನಿಮಿಷಕ್ಕೆ 75ಕ್ಕೆ ಏರಿದ್ದು, ಈ ಮೊದಲು 60ಕ್ಕಿಂತ ಕಡಿಮೆ ಇತ್ತು. ಉತ್ತಮ ಸೌಲಭ್ಯಗಳನ್ನು ಒದಗಿಸಿದ ನಂತರ ಬುಕಿಂಗ್ ಮಿತಿಯನ್ನು ಹೆಚ್ಚಿಸಲು ದೇವಸ್ವಂ ಮಂಡಳಿಯು ಹೈಕೋರ್ಟ್ ಸಂಪರ್ಕಿಸುವ ಸಾಧ್ಯತೆ ಇದೆ. ಕಳೆದ ವರ್ಷ ಸುಮಾರು ಒಂದೂ ಮುಕ್ಕಾಲು ಲಕ್ಷ ಜನ ಯಾವುದೇ ದೂರು ಇಲ್ಲದೆ ಸನ್ನಿಧಾನಕ್ಕೆ ಬಂದು ದೇವರ ದರ್ಶನವನ್ನು ಪಡೆದು ಹೋದರು.

    ಯಾತ್ರಿಗಳ ಸಂಖ್ಯೆ
    ಈ ವರ್ಷ 28 ದಿನಗಳ ನಂತರ: 17,56,730
    ಕಳೆದ ವರ್ಷ: 19, 09,241
    28 ದಿನಗಳ ಆದಾಯ (ಬ್ರಾಕೆಟ್​ನಲ್ಲಿರುವುದು ಕಳೆದ ವರ್ಷದ ಆದಾಯ)
    ಅಪ್ಪಂ: 8,99,05,545 (9,43,54,875)
    ಹುಂಡಿ ಕಾಣಿಕೆ: 61,91,32,020 (73,75,46,670)
    ದರ್ಶನ: 41,80,66,720 (46,45,85,520)
    ವಸತಿ (ಆನ್​ಲೈನ್​​): 34,16,425 (33,92,050)
    ಆಫರಿಂಗ್​ (ಆನ್​ಲೈನ್​) : 71,46,565 (1,14,36,17)
    ಆಹಾರ ದೇಣಿಗೆ: 1,14,45,455, (1,20,71,97)
    ಒಟ್ಟು ಆದಾಯ: 134,44,90,495 (154,77,97,005)
    ಕಳೆದ ವರ್ಷ ಭಕ್ತರ ಸಂಖ್ಯೆ: 65 ಲಕ್ಷ
    ಕಳೆದ ವರ್ಷದ ಆದಾಯ: 251 ಕೋಟಿ ರೂ.

    ತೊಡೆಯ ಮೇಲೆ ಲ್ಯಾಪ್​ಟಾಪ್​ ಇಟ್ಟು ಕೆಲಸ ಮಾಡುವ ಅಭ್ಯಾಸವಿದೆಯೇ? ಹಾಗಾದ್ರೆ ಇದನ್ನೊಮ್ಮೆ ಓದಲೇಬೇಕು…

    300 ಕೋಟಿ ಹಣ ನನ್ನದಲ್ಲ ಆದರೆ… ಕೊನೆಗೂ ಬಾಯ್ಬಿಟ್ಟ ಕಾಂಗ್ರೆಸ್​ ಸಂಸದ, ಈ ಮಾತನ್ನು ನೀವು ಒಪ್ಪುವಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts