ಸಿನಿವಾಣಿ

ವಿನೋದ್ v/s ಕಿಟ್ಟಿ; ವಿಲನ್ ಆಗಿ ಎಂಟ್ರಿ..

Webdesk - Ravikanth

ಬೆಂಗಳೂರು: ವಿನೋದ್ ಪ್ರಭಾಕರ್ ಅಭಿನಯದಲ್ಲಿ ‘ಮಾದೇವ’ ಎಂಬ ಹೊಸ ಚಿತ್ರ ಎರಡು ತಿಂಗಳ ಹಿಂದೆ ಶುರುವಾಗಿದ್ದು ನೆನಪಿರಬಹುದು. ಈಗ ಆ ಚಿತ್ರಕ್ಕೆ ಹೊಸ ವಿಲನ್ ಆಗಿ ಶ್ರೀನಗರ ಕಿಟ್ಟಿ, ವಿನೋದ್ ಪ್ರಭಾಕರ್​ಗೆ ಟಕ್ಕರ್ ಕೊಡುತ್ತಿದ್ದು, ಈಗಾಗಲೇ ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ.

‘ಮಾದೇವ’ ಚಿತ್ರಕ್ಕೆ ಕಿಟ್ಟಿ ಸೇರ್ಪಡೆಯ ಬಗ್ಗೆ ಮತ್ತವರ ಪಾತ್ರದ ಬಗ್ಗೆ ಮಾತನಾಡುವ ನಿರ್ದೇಶಕ ನವೀನ್, ‘ಕಿಟ್ಟಿ ಇಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಡೀ ಚಿತ್ರದಲ್ಲಿರುತ್ತಾರೆ. ಅವರಿಗೆ ಮೂರು ಗೆಟಪ್​ಗಳಿವೆ. ಅವರ ಪಾತ್ರದ ಹೆಸರು ಸಮುದ್ರ ಅಂತ. ಅಲೆಗಳ ತರಹವೇ ಅವರ ಪಾತ್ರವೂ ಇರುತ್ತದೆ, 80ರ ದಶಕದ ಗ್ಯಾಂಗ್​ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಐದು ದಿನಗಳಿಂದ ಕಿಟ್ಟಿ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೂ 15 ದಿನಗಳ ಶೂಟಿಂಗ್ ಬಾಕಿ ಇದೆ’ ಎನ್ನುತ್ತಾರೆ.

ಈ ಚಿತ್ರದ ಬಗ್ಗೆ ನವೀನ್ ಹೆಚ್ಚು ವಿಷಯ ಬಿಟ್ಟುಕೊಡುವುದಿಲ್ಲ. ‘ಎಮೋಷನ್ ಇಲ್ಲದಿರುವ ಒಬ್ಬ ವ್ಯಕ್ತಿಯ ಜೀವನದಲ್ಲಿ ಭಾವನೆಗಳು ಬಂದಾಗ ಏನಾಗುತ್ತದೆ ಎಂಬುದೇ ಚಿತ್ರದ ಕಥೆ. ಮಾದೇವನ ಪಾತ್ರದಲ್ಲಿ ವಿನೋದ್ ಪ್ರಭಾಕರ್, ನಾಯಕಿಯಾಗಿ ಸೋನಲ್ ಮಾಂತೆರೋ ಇದ್ದಾರೆ. ಜತೆಗೆ ಶ್ರುತಿ, ಶ್ರೀನಗರ ಕಿಟ್ಟಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಮುಂತಾದವರ ತಾರಾಗಣವಿದೆ. ಈಗಾಗಲೇ ಬೆಂಗಳೂರು, ಮದ್ದೂರು, ಶಿವಮೊಗ್ಗ ಮುಂತಾದ ಕಡೆ ಶೇಕಡಾ 50ರಷ್ಟು ಚಿತ್ರೀಕರಣವಾಗಿದೆ’ ಎನ್ನುತ್ತಾರೆ ನವೀನ್ ರೆಡ್ಡಿ.