ಸಿನಿವಾಣಿ

ಶ್ರೀಲೀಲಾ ಕೆರಿಯರ್​ ಕ್ಲೋಸ್​ ಅಂದವರಿಗೆ ಖಡಕ್​ ಉತ್ತರ ಕೊಟ್ಟ ಕನ್ನಡತಿ! ನಿಜಕ್ಕೂ ಕ್ರೇಜಿ ಪ್ರಾಜೆಕ್ಟ್​ ಇದು

ಹೈದರಾಬಾದ್​: ಕನ್ನಡ ಚಿತ್ರರಂಗದಲ್ಲಿ ಸಿನಿ ಜರ್ನಿ ಆರಂಭಿಸಿ ತೆಲುಗು ಚಿತ್ರರಂಗಕ್ಕೆ ಹಾರಿ, ಭರ್ಜರಿ ಯಶಸ್ಸು ಕಂಡವರು ನಟಿ ಶ್ರೀಲೀಲಾ. ಕೆಲವು ನಟಿಯರು ಮೊದಲ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದುಬಿಡುತ್ತಾರೆ. ಸಿನಿಮಾ ಚೆನ್ನಾಗಿಲ್ಲ ಅಂದ್ರು ನಾಯಕಿಯರು ಮಾತ್ರ ಮೊದಲ ಸಿನಿಮಾ ಬಳಿಕ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಅಲ್ಲದೆ, ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಸ್ಟಾರ್​ ನಟಿಯರ ಸಾಲಿಗೆ ಸೇರಿಬಿಡುತ್ತಾರೆ. ಇಂತಹ ನಾಯಕಿಯರಲ್ಲಿ ಶ್ರೀಲೀಲಾ ಕೂಡ ಒಬ್ಬರು.

ಶ್ರೀಲೀಲಾ ತಾನು ನಟಿಸಿದ ಮೊದಲ ತೆಲುಗು ಸಿನಿಮಾ “ಪೆಳ್ಳಿಸಂದಡಿ” ಯಲ್ಲೇ ಎಲ್ಲರ ಗಮನ ಸೆಳೆದರು. ಆದರೆ, ಈ ಸಿನಿಮಾ ಹೇಳಿಕೊಳ್ಳುವಷ್ಟು ಹಿಟ್​ ಆಗಲಿಲ್ಲ. ಬಳಿಕ ಧಮಾಕ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಸೂಪರ್​ ಹಿಟ್​ ಆಯಿತು. ತನ್ನ ನಟನೆ, ಗ್ಲಾಮರ್​ ಲುಕ್​ ಮತ್ತು ಡಾನ್ಸ್​ನಿಂದಲೇ ಶ್ರೀಲೀಲಾ ಟಾಲಿವುಡ್​ನಲ್ಲಿ ಒಳ್ಳೆಯ ಹೆಸರು ಮಾಡಿದರು. ಎರಡನೇ ಚಿತ್ರದಲ್ಲೇ ಸ್ಟಾರ್​ ಹೀರೋಯಿನ್​ ಪಟ್ಟ ಗಿಟ್ಟಿಸಿದರು. ಧಮಾಕ ಬಳಿಕ ಟಾಲಿವುಡ್​ನಲ್ಲಿ ಎಲ್ಲರೂ ಶ್ರೀಲೀಲಾ ಜಪ ಮಾಡಲು ಶುರು ಮಾಡಿದರು. ಎಲ್ಲ ಬಿಗ್​ ಬ್ಯಾನರ್​ ನಿರ್ಮಾಣ ಸಂಸ್ಥೆಗಳು ಕೂಡ ಶ್ರೀಲೀಲಾರನ್ನು ಹುಡುಕಿಕೊಂಡು ಬಂದರು. ಸಾಕಷ್ಟು ಸಿನಿಮಾಗಳಿಗೆ ಸಹಿ ಹಾಕಿದ ಶ್ರೀಲೀಲಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಸ್ಕ್ರಿಪ್ಟ್​ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ ಶ್ರೀಲೀಲಾ ಕೊನೆ ಸಾಲು ಸಾಲು ಫ್ಲಾಪ್​ ಸಿನಿಮಾಗಳನ್ನು ನೀಡಬೇಕಾಯಿತು.

ಸ್ಕಂದ, ಆದಿಕೇಶವ ಮತ್ತು ಎಕ್ಸ್ಟ್ರಾರ್ಡಿನರಿ ಮ್ಯಾನ್​ ಸಿನಿಮಾಗಳು ಫ್ಲಾಪ್​ ಆಗಿವೆ. ನಂದಮುರಿ ಬಾಲಕೃಷ್ಣ ಅಭಿನಯದ ಭಗವಂತ್​ ಕೇಸರಿ ಸಿನಿಮಾ ಮಾತ್ರ ಹಿಟ್​ ಆಯಿತು. ಈ ಚಿತ್ರದಲ್ಲಿ ಶ್ರೀಲೀಲಾ ಮುಖ್ಯ ಪಾತ್ರದಲ್ಲಿ ನಟಿಸಿದರೂ ಸಿನಿಮಾ ಯಶಸ್ಸು ಬಾಲಯ್ಯ ಖಾತೆಗೆ ಸೇರಿಕೊಂಡಿತು. ಸಾಲು ಸಾಲು ಫ್ಲಾಪ್​ ಸಿನಿಮಾಗಳನ್ನು ನೀಡಿದರೂ ಟಾಲಿವುಡ್​ ಸೂಪರ್​ಸ್ಟಾರ್​ ಮಹೇಶ್​ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾದಲ್ಲಿ ಶ್ರೀಲೀಲಾ ಅವಕಾಶ ಗಿಟ್ಟಿಸಿಕೊಂಡರು. ಆದರೆ, ಈ ಸಿನಿಮಾ ಹಿಟ್​ ಆಗಲಿಲ್ಲ. ಇದರಿಂದ ಶ್ರೀಲೀಲಾ ಕೆರಿಯರ್ ಕ್ಲೋಸ್ ಆಗಿದೆ. ಇನ್ನು ಮುಂದೆ ಅವಕಾಶಗಳು ಸಿಗುವುದಿಲ್ಲ ಎಂಬ ಮಾತುಗಳು ಕೇಳಲಾರಂಭಿಸಿದವು. ಶ್ರೀಲೀಲಾ ಕತೆ ಮುಗೀತು ಎಂದು ಮಾತನಾಡಿಕೊಳ್ಳುತ್ತಿದ್ದವರಿಗೆ ಇದೀಗ ಶ್ರೀಲೀಲಾ ಖಡಕ್​ ಉತ್ತರ ನೀಡಿದ್ದಾರೆ.

ಶ್ರೀಲೀಲಾ ತೆಲುಗಿನ ಚಿತ್ರಾಂಗಧ ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದರು. ಆದರೆ, ನಟಿಯಾಗಿ ಮೊದಲು ಕಾಣಿಸಿಕೊಂಡಿದ್ದು ಕನ್ನಡ ಚಿತ್ರಗಳಲ್ಲಿ. ಬಳಿಕ ತೆಲುಗಿನಲ್ಲಿ ನಟ ಶ್ರೀಕಾಂತ್ ಅವರ ಮಗನ ಜತೆ ಪೆಳ್ಳಿಸಂದಡಿ ಚಿತ್ರದ ಮೂಲಕ ತೆಲುಗಿನಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಆಕೆಯ ನಟನೆ ಮತ್ತು ನೃತ್ಯಕ್ಕೆ ತೆಲುಗು ಅಭಿಮಾನಿಗಳು ಫಿದಾ ಆಗಿದ್ದಾರೆ. ಶ್ರೀಲೀಲಾ ಮಾಡಿದ ಬಹುತೇಕ ಸಿನಿಮಾಗಳು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಹೀಗಾಗಿ ಆಕೆಯನ್ನು ತೆಲುಗಿನಲ್ಲಿ ಐರನ್ ಲೆಗ್ ಎಂದು ಬ್ರಾಂಡ್ ಮಾಡಲಾಯಿತು.

ಅಸಲಿಗೆ ಶ್ರೀಲೀಲಾ ಲುಕ್ ಚೆನ್ನಾಗಿದೆ ಮತ್ತು ಚೆನ್ನಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ ಎಂದು ಅಭಿಮಾನಿಗಳು ಪ್ರಚಾರ ಆರಂಭಿಸಿದ್ದಾರೆ. ಆದರೆ, ಸದ್ಯದಲ್ಲೇ ಆಕೆಯ ಕೆರಿಯರ್ ಕ್ಲೋಸ್ ಆಗಲಿದೆ ಎಂಬ ಮಾತು ಇಂಡಸ್ಟ್ರಿಯಲ್ಲಿ ಶುರುವಾಗಿದೆ. ಇಂತಹ ಕ್ಷಣದಲ್ಲಿ ಯಾವುದೇ ನಾಯಕಿಯಾದರೂ ಖಿನ್ನರಾಗುತ್ತಾರೆ. ಅಲ್ಲದೆ, ಶ್ರೀಲೀಲಾ ಕೂಡ ತುಂಬಾ ಭಾವುಕರಾಗಿದ್ದರು. ಆದರೆ, ಈಗ ಕ್ರೇಜಿ ಸುದ್ದಿಯೊಂದು ವೈರಲ್ ಆಗುತ್ತಿದೆ. ಅದೇನೆಂದರೆ ಸ್ಟಾರ್​ ನಾಯಕನ ಜೊತೆ ಪ್ಯಾನ್ ಇಂಡಿಯಾ ಪ್ರಾಜೆಕ್ಟ್​ನೊಂದಿಗೆ ಶ್ರೀಲೀಲಾ ಕಂಬ್ಯಾಕ್​ ಮಾಡುತ್ತಿದ್ದಾರೆ. ಆ ಹೀರೋ ಬೇರೆ ಯಾರೂ ಅಲ್ಲ ಅಜಿತ್. ಹೌದು, ಇತ್ತೀಚೆಗಷ್ಟೇ ಅಜಿತ್ ಅನೌನ್ಸ್ ಮಾಡಿರುವ "ಗುಡ್​ ಬ್ಯಾಡ್​ ಅಗ್ಲಿ" ನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರಂತೆ.

ಗುಡ್​ ಬ್ಯಾಡ್​ ಅಗ್ಲಿ ಟೈಟಲ್ ಬಿಡುಗಡೆಯಾದಾಗಿನಿಂದಲೂ ಇದು ಅಜಿತ್ ಕುಮಾರ್ ಅವರ ವೃತ್ತಿಜೀವನಕ್ಕೆ ವಿಶೇಷ ಪ್ರಾಜೆಕ್ಟ್ ಆಗಲಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಇದೀಗ ಇಂಥದ್ದೊಂದು ಸಿನಿಮಾದಲ್ಲಿ ಅದರಲ್ಲೂ ಅಜಿತ್​ ಜತೆ ಶ್ರೀಲೀಲಾ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮಾರ್ಕ್ ಆ್ಯಂಟನಿ ಖ್ಯಾತಿಯ ಅಚಿಕ್ ರವಿಚಂದ್ರನ್ ಅವರ ನಿರ್ದೇಶನದಲ್ಲಿ ನಟ ವಿಶಾಲ್ ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೀಲೀಲಾ ಸದ್ಯ ತಮ್ಮ ವೃತ್ತಿ ಜೀವನದಲ್ಲಿ ಹೊಸ ಹೆಜ್ಜೆ ಇಡಲು ರೆಡಿಯಾಗುತ್ತಿದ್ದಾರೆ. ಅದರಲ್ಲೂ ಕಥೆಯ ಆಯ್ಕೆಯ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸುತ್ತಿದ್ದಾರೆ ಅನ್ನಿಸುತ್ತದೆ. ಈ ಹಿನ್ನಲೆಯಲ್ಲಿ ಅಭಿಮಾನಿಗಳು ಕೂಡ ಗುಡ್ ಬ್ಯಾಡ್ ಆಗ್ಲಿ ಸಿನಿಮಾವೇ ಸರಿಯಾದ ಆಯ್ಕೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್​)