ಸಿನಿವಾಣಿ

ರಾಮ್ ಸೇತು ಚಿತ್ರಕ್ಕೆ ಶ್ರೀಲಂಕನ್ ಚೆಲುವೆ

ನಿಜಕ್ಕೂ ಇದು ಕಾಕತಾಳೀಯ! ಬಾಲಿವುಡ್​ನಲ್ಲಿ ಹೆಸರು ಮಾಡಿರುವ ನಟಿ ಜಾಕ್​ಲೀನ್ ಫರ್ನಾಂಡೀಸ್ ಮೂಲತಃ ಶ್ರೀಲಂಕಾದವರು. ಈಗ ಇದೇ ನಟಿ ಅಕ್ಷಯ್ ಕುಮಾರ್ ಅವರ ‘ರಾಮ್ ಸೇತು’ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ‘ರಾಮ್ೇತು’ ಕಾಲ್ಪನಿಕವೋ ಅಥವಾ ನಿಜವೋ ಎಂಬ ವಿಚಾರವನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ದೇಶಕ ಅಭಿಷೇಕ್ ಶರ್ಮಾ ಸಿನಿಮಾ ಮಾಡುತ್ತಿದ್ದಾರೆ. ಭಾರತದ ಜತೆಗೆ ಶ್ರೀಲಂಕಾಕ್ಕೂ ರಾಮ್ ಸೇತುವಿನ ನಂಟಿರುವ ಹಿನ್ನೆಲೆಯಲ್ಲಿ, ಆ ದೇಶದ ಸುಂದರಿಯನ್ನೇ ನಿರ್ದೇಶಕರು ಆಯ್ದುಕೊಂಡಿದ್ದಾರೆ. ಈಗಾಗಲೇ ಅಕ್ಷಯ್ ಕುಮಾರ್ ಜತೆಗೆ ನಾಲ್ಕು ಸಿನಿಮಾಗಳಲ್ಲಿ ಜಾಕ್​ಲೀನ್ ನಟಿಸಿದ್ದಾರೆ. ‘ಬ್ರದರ್ಸ್’ ಚಿತ್ರದಿಂದ ಆರಂಭವಾಗಿ ‘ಹೌಸ್​ಫುಲ್ 2’, ‘ಹೌಸ್​ಫುಲ್ 3’ ಮತ್ತು ‘ಬಚ್ಚನ್ ಪಾಂಡೆ’ ಚಿತ್ರಗಳಲ್ಲಿ ಅಕ್ಷಯ್- ಜಾಕ್​ಲೀನ್ ಕಾಣಿಸಿಕೊಂಡಿದ್ದಾರೆ. ಇದೀಗ ‘ರಾಮ್ೇತು’ ಚಿತ್ರದ ಮೂಲಕ ಐದನೇ ಬಾರಿ ಒಂದಾಗುತ್ತಿದ್ದಾರೆ. ಸದ್ಯ ಈ ವಿಚಾರ ಅಧಿಕೃತವಾಗಿದ್ದು, ಜಾಕ್​ಲೀನ್ ಜತೆಗೆ ಮತ್ತೋರ್ವ ನಟಿ ನುಸ್ರತ್ ಬರೂಚಾ ಸಹ ಎರಡನೇ ನಾಯಕಿಯಾಗಿದ್ದಾರೆ.

ಈ ಸಿನಿಮಾಕ್ಕೆ ಅರುಣಾ ಬಾಟಿಯಾ, ವಿಕ್ರಂ ಮಲ್ಹೋತ್ರಾ ಬಂಡವಾಳ ಹೂಡುತ್ತಿದ್ದು, ಸ್ವತಃ ಕೇಪ್ ಆಫ್ ಗುಡ್ ಫಿಲಂಸ್ ಹೋಮ್ ಬ್ಯಾನರ್​ನಲ್ಲಿ ಅಕ್ಷಯ್ ಕುಮಾರ್ ಸಹ ಚಿತ್ರದ ನಿರ್ವಣದಲ್ಲಿ ಪಾಲುದಾರರಾಗಿದ್ದಾರೆ. ಜೂನ್ ಅಥವಾ ಜುಲೈನಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆಯಂತೆ. ಈ ಸಿನಿಮಾ ಹೊರತುಪಡಿಸಿದರೆ, ‘ಪೃಥ್ವಿರಾಜ್ ಚೌಹಾಣ್’, ‘ಬಚ್ಚನ್ ಪಾಂಡೆ’, ‘ರಕ್ಷಾ ಬಂಧನ’ ಸೇರಿ ಇನ್ನೂ ಹಲವು ಸಿನಿಮಾ ಕೆಲಸಗಳಲ್ಲಿ ಅಕ್ಷಯ್ ಬಿಜಿಯಾಗಿದ್ದಾರೆ. ಇತ್ತ ಜಾಕ್​ಲೀನ್ ಸಹ ಸಾಲುಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.