ಸಿನಿವಾಣಿ

'ಶ್ರೀ ಅಲ್ಲಮ ಪ್ರಭು' ಟ್ರೇಲರ್​ ಬಿಡುಗಡೆ ಮಾಡಿದ ಮುತಾಲಿಕ್​, ಪ್ರೇಮ್​

chetannadiger

ಬೆಂಗಳೂರು: 'ಈ ಚಿತ್ರವನ್ನು ನಾವು ಪ್ರಭುಲಿಂಗ ಲೀಲೆಯನ್ನಾಧರಿಸಿ ಮಾಡಿದ್ದೇವೆ. 1957ರಲ್ಲಿ ಶಂಕರ್​ ಸಿಂಗ್​ ಅವರು 'ಪ್ರಭುಲಿಂಗ ಲೀಲೆ' ಚಿತ್ರ ಮಾಡಿದ್ದರು. ಈಗ ಅದರ ನೆಗೆಟಿವ್​ ಸಹ ಇಲ್ಲ. ಅದು ದಾಖಲಾಗಬೇಕು ಎಂಬ ಕಾರಣಕ್ಕೆ ಈ ಚಿತ್ರ ಮಾಡಿದ್ದೇವೆ. ಎರಡೂ ಚಿತ್ರಗಳು ಅಲ್ಲಮರ ಕುರಿತದ್ದಾದರೂ, ಎರಡರಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ ...'

ಹಾಗಂತ ಹೇಳಿದ್ದು 'ಶ್ರೀ ಅಲ್ಲಮ ಪ್ರಭು' ಚಿತ್ರದ ನಿರ್ಮಾಪಕ ಮಾಧವಾನಂದ. ಕೆಲವು ವರ್ಷಗಳ ಹಿಂದೆ ಟಿ.ಎಸ್​. ನಾಗಾಭರಣರು 'ಅಲ್ಲಮ' ಎಂಬ ಚಿತ್ರ ಮಾಡಿದ್ದರು. ಈಗ 'ಶ್ರೀ ಅಲ್ಲಮ ಪ್ರಭು' ಎಂಬ ಚಿತ್ರ ತಯಾರಾಗಿದೆ. ಎರಡೂ ಚಿತ್ರಗಳಲ್ಲಿ ಏನಾದರೂ ಸಾಮ್ಯತೆಗಳಿವೆಯೇ ಎಂದಾಗ ಮಾಧವಾನಂದ ಉತ್ತರಿಸಿದ್ದು ಹೀಗೆ.

ಅಂದಹಾಗೆ, ಬಿಡುಗಡೆಗೆ ಸಿದ್ಧವಾಗಿರುವ 'ಶ್ರೀ ಅಲ್ಲಮ ಪ್ರಭು' ಚಿತ್ರದ ಟ್ರೇಲರ್​ ಮಂಗಳವಾರ ಬಿಡುಗಡೆ ಆಗಿದೆ. ಪ್ರಮೋದ್​ ಮುತಾಲಿಕ್​ ಮತ್ತು ನಟ ಪ್ರೇಮ್​ ಜಂಟಿಯಾಗಿ ಈ ಟ್ರೇಲರ್​ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಪ್ರೇಮ್​, 'ನಮ್ಮದು ಶಂಕರಾಚಾರ್ಯ, ಬಸವಣ್ಣ, ಅಲ್ಲಮ, ವಿವೇಕಾನಂದ ಮುಂತಾದ ಸಂತರು ಕಟ್ಟಿದ ನಾಡು. ಹಾಗಾಗಿ, ಬಹಳ ಸದೃಢವಾಗಿದೆ. ಲಕ್ಷ ಕೆ.ಜಿ ಚಿನ್ನ ಲೂಟಿ ಮಾಡಿದರೂ ಗಟ್ಟಿಯಾಗಿದೆ. ಅದಕ್ಕೇ ಇದನ್ನು ಪುಣ್ಯಭೂಮಿ ಎನ್ನುವದು. ಸಂತರ ಜೀವನವನ್ನು ಆಧರಿಸಿ ಈ ಕಾಲದಲ್ಲಿ ಸಿನಿಮಾ ಮಾಡುವುದು ಸುಲಭವಲ್ಲ. ಆ ಕೆಲಸವನ್ನು ಈ ತಂಡ ಮಾಡಿದೆ. ಈ ತಂಡಕ್ಕೆ ಒಳ್ಳೆಯದಾಗಲಿ' ಎಂದು ಹಾರೈಸಿದರು.

ಕಮರ್ಷಿಯಲ್​ ಚಿತ್ರಗಳ ನಡುವೆಯೂ ಸಂತರ, ಶರಣರ ಕುರಿತಾಗಿ ಚಿತ್ರ ಮಾಡಿರುವುದು ಖುಷಿಯ ವಿಚಾರ ಎಂದೇ ಮಾತು ಶುರು ಮಾಡಿದರು ಪ್ರಮೋದ್​ ಮುತಾಲಿಕ್​. 'ಈಗಲೂ ಅಲ್ಲಮರ ವಚನ, ವಿಚಾರ ಮತ್ತು ಮಾರ್ಗದರ್ಶನ ಸಮಾಜಕ್ಕೆ ಬೇಕಾಗಿದೆ. ಅದನ್ನು ಸಿನಿಮಾದಂತಹ ಪ್ರಭಾವಿ ಮಾಧ್ಯಮದ ಮೂಲಕ ತಲುಪಿಉತ್ತಿರುವುದು ಖುಷಿಯ ವಿಚಾರ' ಎಂದರು.