ಹೈದರಾಬಾದ್: ಶ್ರೀಲೀಲಾ ಅಭಿನಯದ ಮೊದಲ ತೆಲುಗು ಚಿತ್ರ 'ಪೆಳ್ಳಿ ಸಂದಡಿ' ಅಷ್ಟೇ ದೊಡ್ಡ ಹಿಟ್ ಆಗಲಿಲ್ಲ. ಆದರೂ ಶ್ರೀಲೀಲಾಗೆ ಟಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿದ್ದು, ಆಕೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಈಗಾಗಲೇ ಮಹೇಶ್ ಬಾಬು ಅಭಿನಯದ 'ಎಸ್ಎಸ್ಎಂಬಿ 28' ಮತ್ತು 'ಅನಗನಗಾ ಒಕ ರೋಜು' ಚಿತ್ರಗಳಲ್ಲಿ ನಟಿಸುತ್ತಿರುವ ಶ್ರೀಲೀಲಾ, ಈಗ ಟಾಲಿವುಡ್ನ ಇನ್ನೊಂದು ದೊಡ್ಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಅಭಿನಯದ 108ನೇ ಚಿತ್ರಕ್ಕೆ ಶ್ರೀಲೀಲಾ ಆಯ್ಕೆಯಾಗಿದ್ದು, ಈಗಾಗಲೇ ಹೈದರಾಬಾದ್ನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಶ್ರೀಲೀಲಾ ಭಾಗವಹಿಸಿದ್ದಾರೆ.
ನಂದಮೂರಿ ಬಾಲಕೃಷ್ಣಗೆ ಶ್ರೀಲೀಲಾ ನಾಯಕಿಯಾ ಎಂಬ ಪ್ರಶ್ನೆ ಎದುರಾಗಬಹುದು. ಏಕೆಂದರೆ, ಬಾಲಕೃಷ್ಣ ಅವರಿಗೆ ಈಗ 61 ವಯಸ್ಸು. ಶ್ರೀಲೀಲಾಗೆ 22 ಅಷ್ಟೇ. ಅವರಿಬ್ಬರ ಮಧ್ಯೆ ವಯಸ್ಸಿನ ಅಂತರ ಬಹಳ ದೊಡ್ಡದು. ಹಾಗಾಗಿ, ಅವರಿಬ್ಬರು ನಾಯಕ-ನಾಯಕಿಯಾಗಿ ನಟಿಸುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ನಾಯಕಿಯೋ ಅಥವಾ ತಂಗಿಯ ಪಾತ್ರವೋ ಗೊತ್ತಿಲ್ಲ. ಚಿತ್ರತಂಡದವರು ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ಶ್ರೀಲೀಲಾ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಂತೂ ಕಾಣಿಸಿಕೊಳ್ಳುತ್ತಿದ್ದಾರೆ.
ಎನ್ಬಿಕೆ108 ಚಿತ್ರವನ್ನು ಅನಿಲ್ ರಾವಿಪುಡಿ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಚಿತ್ರ ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.