ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಹತ್ವಾಕಾಂಕ್ಷೆಯ ಸಿನಿಮಾ 'ಗಂಧದಗುಡಿ' ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆಯೇ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕನ್ನಡ ಸಿನಿಪ್ರಿಯರಿಗೆ ಭರ್ಜರಿ ಕೊಡುಗೆಯೊಂದನ್ನು ನೀಡಿದ್ದಾರೆ.
'ಗಂಧದಗುಡಿ' ಅಪ್ಪು ಅವರ ಒಂದು ಕನಸು, ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪಗೊಳ್ಳಲು ಕಾರಣ, ಈ ಸಿನಿಮಾ ಎಲ್ಲ ಕನ್ನಡಿಗರು ನೋಡಬೇಕು, ಅದರಲ್ಲೂ ಮಕ್ಕಳು ನೋಡಬೇಕೆಂಬುದು ಅಪ್ಪು ಅವರ ಉದ್ದೇಶ. ಈ ಸಲುವಾಗಿ ನಾನು ಹಾಗೂ ಚಿತ್ರ ತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಚಿತ್ರ 'ಗಂಧದಗುಡಿ'ಯ ವೀಕ್ಷಣೆಗೆ ವಿಶೇಷ ಕೊಡುಗೆ ನೀಡುತ್ತಿರುವುದಾಗಿ ಅವರು ಘೋಷಿಸಿದ್ದಾರೆ.
ನ.7ರಿಂದ ನ.10ರ ವರೆಗೂ ಸಿಂಗಲ್ ಸ್ಕ್ರೀನ್ ಥೀಯೇಟರ್ಗಳಲ್ಲಿ 56 ರೂ. ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ 112 ರೂ. ಟಿಕೆಟ್ ದರದಲ್ಲಿ ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲ ಆಟಗಳನ್ನು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ ಎಂದಿರುವ ಅಶ್ವಿನಿ, ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ಸಂರಕ್ಷಿಸೋಣ, ಗಂಧದಗುಡಿಯನ್ನು ತೋರಿಸೋಣ ಎಂದು ಹೇಳಿಕೊಂಡಿದ್ದಾರೆ.