ಸಿನಿವಾಣಿ

ದುಬೈನಲ್ಲಿ ನಡೆಯಲಿದೆ 'ನೀನೇ ರಾಜಕುಮಾರ' ಎಂಬ ವಿಶೇಷ ಸಂಗೀತ ರಸಸಂಜೆ!

ಪವರ್ ಸ್ಟಾರ್ ನಟ ಪುನೀತ್ ರಾಜ್​ಕುಮಾರ್ ಅವರ ಸ್ಮರಣಾರ್ಥದ ಅಂಗವಾಗಿ ಹಲವು ಕಾರ್ಯಕ್ರಮಗಳು ಈ ಹಿಂದೇ ನಡೆದಿದ್ದು, ಈಗಲೂ ನಡೆಯುತ್ತಲೇ ಇವೆ. ಆದರೆ, ಇದೀಗ ಅಪ್ಪು ಅವರ ಸ್ಮರಣಾರ್ಥ ಸಂಗೀತ ರಸಸಂಜೆ ಒಂದನ್ನು ದುಬೈನಲ್ಲಿ ಆಯೋಜಿಸಲಾಗಿದೆ. ಹೌದು, ಪವರ್ ಸ್ಟಾರ್ ಪುನೀತ್ ಹಾಗೂ ಸ್ವರ ಮಾಂತ್ರಿಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರ ಸ್ಮರಣಾರ್ಥ ಕುರಿತು 'ನೀನೇ ರಾಜಕುಮಾರ' ಎಂದು ಒಂದು ಕಾರ್ಯಕ್ರಮ ದುಬೈನಲ್ಲಿ ಇದೇ ಫೆಬ್ರವರಿ 19 2022 ರಂದು ಸಂಜೆ 6 ಗಂಟೆಗೆ ಅಲ್ ನಸರ್ ಲೈಜರ್ ಲ್ಯಾಂಡ್‌ನಲ್ಲಿ ನಡೆಯಲಿದೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಈ ಕಾರ್ಯಕ್ರಮದ ಹೈಲೈಟ್ ಆಗಲಿದ್ದಾರೆ. ಇನ್ನು, ಈ ಕಾರ್ಯಕ್ರಮದ ಪೂರ್ವ ಸಿದ್ಧತೆಗಳು ಈಗಾಗಲೇ ಭರದಿಂದ ಸಾಗುತ್ತಿವೆ ಎಂಬ ಮಾಹಿತಿಯೂ ಇದೆ.
'ನೀನೇ ರಾಜಕುಮಾರ' ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ಅವರ ಜೊತೆಗೆ ಗಾಯಕಿ ಅನುರಾಧ ಭಟ್, ಮೇಘನಾ ಭಟ್, ಗಾಯಕ ಹರೀಶ್ ಶೇರಿಗಾರ್ ಹಾಗೂ ಹತ್ತಕ್ಕೂ ಹೆಚ್ಚು ಸಂಗೀತಗಾರರು ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮಕ್ಕೆ ನಿರೂಪಣೆಯನ್ನು ನಿರೂಪಕಿ ಅನುಪಮ ಭಟ್, ಆರ್ ಜೆ ಎರಾಲ್ ಮಾಡಿಲಿದ್ದಾರಂತೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಆನ್‌ಲೈನ್​ನಲ್ಲಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿದೆ. ಅಪ್ಪು ಅವರ ಸ್ಮರಣಾರ್ಥ ವಿಜಯ ಪ್ರಕಾಶ್ ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ಹಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇನ್ನು, ಈ ಕಾರ್ಯಕ್ರಮದಲ್ಲಿ ದುಬೈನ ಹಲವು ಉದ್ಯಮಿಗಳು, ಕನ್ನಡ ಚಿತ್ರರಂಗದವರು, ಅಪ್ಪು ಅಭಿಮಾನಿಗಳು, ದುಬೈನ ಕನ್ನಡಿಗರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.