ಸಿನಿವಾಣಿ

ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು?; ಅನಿಶ್ಚಿತತೆಯ ನಡುವೆ ಚಿತ್ರರಂಗ...

Webdesk - Ravikanth
ಕರೊನಾ ಕೇಸ್​ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದೇನೋ ಹೌದು. ಆದರೆ, ಇದು ಮೂರನೆಯ ಅಲೆ ಎಂದು ಯಾವ ರಾಜ್ಯದಲ್ಲೂ ಅಥವಾ ಯಾವ ಸರ್ಕಾರ ಸಹ ಅಧಿಕೃತ ಘೋಷಣೆ ಮಾಡಿಲ್ಲ. ಆದರೂ ಮೂರನೆಯ ಅಲೆಯ ಭಯ ಎಲ್ಲೆಡೆ ಇರುವುದರಿಂದ, ಇಂತಹ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಬೇಕಾ ಎಂಬ ಗೊಂದಲ ಎಲ್ಲ ಚಿತ್ರರಂಗಗಳಲ್ಲೂ ಇದೆ. ಕರೊನಾ ಎರಡು ಅಲೆ ಮತ್ತು ಲಾಕ್​ಡೌನ್​ನಿಂದ ಬೇರೆ ಕ್ಷೇತ್ರಗಳು ಕ್ರಮೇಣ ಚೇತರಿಸಿಕೊಂಡು, ಮೊದಲ ಸ್ಥಿತಿಗೆ ವಾಪಸ್ಸಾಗುತ್ತಿವೆ. ಆದರೆ, ಚಿತ್ರರಂಗ ಮಾತ್ರ ತನ್ನ ಕಾಲ ಮೇಲೆ ನಿಲ್ಲುವುದಕ್ಕೆ ಕಷ್ಟಪಡುತ್ತಿದೆ.

| ಚೇತನ್ ನಾಡಿಗೇರ್ ಬೆಂಗಳೂರು

ಕಳೆದೊಂದು ವಾರದಲ್ಲಿ ಬೇರೆಬೇರೆ ಭಾಷೆಗಳ ಹಲವು ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆ ಯಾಗಿವೆ. ಅಲ್ಲಿಗೆ ಚಿತ್ರರಂಗ ಮತ್ತೆ ಮೊದಲಿನ ಸ್ಥಿತಿಗೆ ಮರಳುತ್ತಿದೆ, ಒಂದರ ಹಿಂದೊಂದು ಚಿತ್ರಗಳು ಬಿಡುಗಡೆಯಾಗಲಿವೆ ಎಂದುಕೊಳ್ಳುವಂತಿಲ್ಲ. ಚಿತ್ರಗಳ ಬಿಡುಗಡೆ ದಿನಾಂಕವೇನೋ ಘೋಷಣೆಯಾಗಿದೆ. ಆದರೆ, ನಿಜಕ್ಕೂ ಆ ದಿನಗಳಂದು ಚಿತ್ರ ಬಿಡುಗಡೆಯಾಗುತ್ತದಾ ಎಂಬ ಗೊಂದಲ ಎಲ್ಲರನ್ನೂ ಕಾಡುತ್ತಿದೆ.

ಕನ್ನಡ ಚಿತ್ರರಂಗದ ಉದಾಹರಣೆಯನ್ನೇ ತೆಗೆದುಕೊಂಡರೆ, ಚಿತ್ರಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿ ಮೂರು ವಾರಗಳಾಗುತ್ತಿವೆ. ಈ ಮೂರು ವಾರಗಳಲ್ಲಿ ಯಾವುದೇ ಹೊಸ ಕನ್ನಡ ಸಿನಿಮಾ ಬಿಡುಗಡೆಯಾಗಿಲ್ಲ. ಇಂದು (ಆ.6) ‘ಕಲಿವೀರ’ ಎಂಬ ಹೊಸ ಚಿತ್ರ ಬಿಡುಗಡೆಯಾಗುತ್ತಿದೆ. ಇನ್ನು ಕಳೆದ ವಾರ, ‘ತಿಮ್ಮರಸು’ ಮತ್ತು ‘ಇಶ್ಕ್’ ಎಂಬ ಎರಡು ತೆಲುಗು ಚಿತ್ರಗಳು ಬಿಡುಗಡೆಯಾಗಿವೆ. ಆಗಸ್ಟ್ 19ಕ್ಕೆ ಅಕ್ಷಯ್ ಕುಮಾರ್ ಅಭಿನಯದ ‘ಬೆಲ್ ಬಾಟಂ’ ಚಿತ್ರ ಬಿಡುಗಡೆಯಾಗುತ್ತಿದೆ. ಲಾಕ್​ಡೌನ್ ನಂತರ ಬಿಡುಗಡೆಯಾಗುತ್ತಿರುವ ದೊಡ್ಡ ಬಜೆಟ್​ನ ಚಿತ್ರ ಇದಾಗಿದ್ದು, ಈ ಚಿತ್ರವು ಜನರನ್ನು ಚಿತ್ರಮಂದಿರಗಳತ್ತ ಸೆಳೆದು ತರಬಹುದಾ ಎಂಬ ಕುತೂಹಲ ಸಿನಿಮಾ ಪಂಡಿತರದ್ದು. ಆದರೆ, ಈ ಚಿತ್ರ ನಿಜಕ್ಕೂ ಬಿಡುಗಡೆಯಾಗುತ್ತದಾ ಎಂಬ ಗೊಂದಲ ಇದೆ.

ಕರ್ನಾಟಕ, ಆಂಧ್ರ, ತೆಲಂಗಾಣ ಮುಂತಾದ ಕಡೆ ಶೇ. 50ರಷ್ಟು ಪ್ರೇಕ್ಷಕರ ಹಾಜರಾತಿಗೆ ಅನುಮತಿ ನೀಡಲಾಗಿದೆಯಾದರೂ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಶೇ. 50ರಷ್ಟು ಹಾಜರಾತಿಗೂ ಅನುಮತಿ ನೀಡಿಲ್ಲ. ಯಾವಾಗ ಅನುಮತಿ ಸಿಗಬಹುದು ಎಂಬುದು ಸಹ ಯಾರಿಗೂ ಗೊತ್ತಿಲ್ಲ. ಏಕೆಂದರೆ, ಕರೊನಾ ಕೇಸ್​ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಮೂರನೆಯ ಅಲೆಯಾ ಎಂದು ಯಾವ ರಾಜ್ಯದಲ್ಲೂ ಅಥವಾ ಯಾವ ಸರ್ಕಾರ ಸಹ ಅಧಿಕೃತ ಘೋಷಣೆಯನ್ನು ಮಾಡಿಲ್ಲ. ಆಗಸ್ಟ್ ಅಥವಾ ಸೆಪ್ಟೆಂಬರ್​ನಲ್ಲಿ ಕರೊನಾ ಮೂರನೇ ಅಲೆ ಬರುವ ಸಾಧ್ಯತೆ ಇದೆ ಅಂತೆಲ್ಲ ಸುದ್ದಿಗಳು ಇರುವುದರಿಂದ, ಇಂತಹ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಬೇಕಾ ಎಂಬ ಗೊಂದಲ ಎಲ್ಲ ಚಿತ್ರರಂಗಗಳನ್ನೂ ಕಾಡುತ್ತಿದೆ. ಜತೆಗೆ ಸರ್ಕಾರಗಳೂ ಸಹ ಚಿತ್ರರಂಗದ ಕುರಿತಾಗಿ ತೀರ್ಮಾನ ತೆಗೆದುಕೊಳ್ಳದೇ ಇರುವುದರಿಂದ ಆತಂಕ ಹೆಚ್ಚಾಗಿದೆ. ಅಂದುಕೊಂಡ ದಿನಾಂಕಕ್ಕೆ ಬಿಡುಗಡೆ ಸಾಧ್ಯವಾದರೆ, ಇನ್ನೊಂದು ದಿನ ಬರುವುದೇನೋ ಇದ್ದೇ ಇದೆ. ಆದರೆ, ಅದರಿಂದ ಬೇರೆ ಚಿತ್ರಗಳಿಗೆ ಸಮಸ್ಯೆ ಎದುರಾಗಿ, ಆ ಚಿತ್ರಗಳೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಕೆಲವರು ಮುನ್ನೆಚ್ಚರಿಕೆಯಾಗಿ, ಅಕ್ಟೋಬರ್​ನಿಂದ ತಮ್ಮ ಚಿತ್ರಗಳ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಮೂರನೆಯ ಅಲೆ ಬಂದರೂ ಅಷ್ಟರಲ್ಲಿ ಪರಿಸ್ಥಿತಿ ಸರಿ ಹೋಗಬಹುದು ಎಂಬ ಅಂದಾಜಿನಿಂದ ದೂರದ ದಿನಾಂಕಗಳನ್ನು ಈಗಲೇ ಫಿಕ್ಸ್ ಮಾಡಿದ್ದಾರೆ. ‘ಕೆಜಿಎಫ್ 2’, ‘ಕೋಟಿಗೊಬ್ಬ 3’ ಸೇರಿ ಕೆಲವು ಚಿತ್ರತಂಡಗಳು ಸದ್ಯಕ್ಕೆ ಯಾವುದೇ ದಿನಾಂಕ ಫಿಕ್ಸ್ ಮಾಡಿಲ್ಲ. ಸುಮ್ಮನೆ ಗೊಂದಲ ಬೇಡ, ಮುಂದೆ ನೋಡಿಕೊಂಡು ನಿರ್ಧಾರಕ್ಕೆ ಬಂದರಾಯ್ತು ಎಂದು ಸುಮ್ಮನಿದ್ದಾರೆ. ಒಟ್ಟಾರೆ, ಚಿತ್ರರಂಗದಲ್ಲಿ ಒಂದು ವಿಚಿತ್ರವಾದ ಗೊಂದಲ ಮತ್ತು ಅನಿಶ್ಚಿತತೆ ಇದೆ. ಇದರಿಂದ ಚಿತ್ರರಂಗ ಯಾವಾಗ ಹೊರಗೆ ಬರುತ್ತದೋ?

ಹಬ್ಬಗಳತ್ತ ಎಲ್ಲರ ಚಿತ್ತ: ಆಷಾಢ ಇನ್ನೇನು ಮುಗಿದು ಶ್ರಾವಣ ಶುರುವಾಗಲಿದೆ. ಶ್ರಾವಣದಲ್ಲಿ ಸಾಲುಸಾಲು ಹಬ್ಬಗಳಿದ್ದು, ಈ ಹಬ್ಬದ ಸೀಸನ್​ನಲ್ಲಿ ಹಲವು ದೊಡ್ಡ ಚಿತ್ರಗಳ ಬಿಡುಗಡೆಯನ್ನು ಘೋಷಿಸಲಾಗಿದೆ. ಆದರೆ, ಈ ಗೊಂದಲ ಮತ್ತು ಭಯದಿಂದ ನಿಜಕ್ಕೂ ಘೋಷಣೆಯಾದ ದಿನದಂದೇ ಬಿಡುಗಡೆಯಾಗುತ್ತದಾ ಅಥವಾ ಮುಂದೆ ಹೋಗುವ ಸಾಧ್ಯತೆ ಇದೆಯಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.

ಇದೊಂದು ಜೂಜು...: ಚಿತ್ರ ಪ್ರದರ್ಶನ ಶುರುವಾಗುತ್ತದೋ, ಇಲ್ಲವೋ ಎಂಬುದೇ ಗೊತ್ತಿಲ್ಲ. ಹಾಗಿರುವಾಗ ಯಾವ ಧೈರ್ಯದ ಮೇಲೆ ‘ಬೆಲ್ ಬಾಟಂ’ ಚಿತ್ರದ ಬಿಡುಗಡೆ ಘೋಷಿಸಿದ್ದೀರಿ ಎಂದು ಅಕ್ಷಯ್ ಕುಮಾರ್ ಅವರನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಅವರು, ‘ಇದೊಂದು ಜೂಜು. ಯಾರಾದರೂ ರಿಸ್ಕ್ ತೆಗೆದುಕೊಳ್ಳಲೇ ಬೇಕಿತ್ತು. ಇನ್ನೆಷ್ಟು ದಿನ ಹೀಗೆ ಕಾಯುತ್ತಾ ಇರುವುದು. ಹಾಗಾಗಿ, ನಾವೇ ರಿಸ್ಕ್ ತೆಗೆದುಕೊಂಡಿದ್ದೇವೆ. ಬಿಡುಗಡೆಗೆ ಇನ್ನೆರಡು ವಾರಗಳಿರುವುದಿಂದ, ಅಷ್ಟರಲ್ಲೊಂದು ಚಿತ್ರಣ ಸಿಗಲಿದೆ. ಒಂದು ಪಕ್ಷ ಅಂದುಕೊಂಡ ದಿನ ಬಿಡುಗಡೆಯಾಗದಿದ್ದರೆ, ಮುಂದಕ್ಕೆ ಹೋಗುವ ಸಾಧ್ಯತೆ ಇದೆ’ ಎಂದು ಅವರು ಹೇಳಿಕೊಂಡಿದ್ದಾರೆ.