ಸಿನಿವಾಣಿ

ಒಂದೇ ಕುಟುಂಬದ ಮೂರು ತಲೆಮಾರಿನ ನಟರಿಗೆ ಗಾಯನ ... ಎಸ್​ಪಿಬಿ ಇನ್ನೊಂದು ದಾಖಲೆ

ಹೈದರಾಬಾದ್​: ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ಎಂಥಾ ವರ್ಸಟೈಲ್​ ಆದ ಗಾಯಕರಾಗಿದ್ದರು ಎಂದರೆ, ಸುಮಾರು ಮೂರು ದಶಕಗಳ ಕಾಲ, ಮೂರು ತಲೆಮಾರಿನ 150ಕ್ಕೂ ಹೆಚ್ಚು ಹೀರೋಗಳಿಗೆ ಹಾಡಿದ್ದರು. ಬರೀ ಹಾಡುವುದಷ್ಟೇ ಅಲ್ಲ, ಪ್ರತಿಯೊಬ್ಬ ಕಲಾವಿದರಿಗೂ ಮ್ಯಾಚ್​ ಆಗುವಂತೆ ಹಾಡುತ್ತಿದ್ದುದು ಅವರ ವಿಶೇಷತೆಯಾಗಿತ್ತು.

ಈ ವಿಷಯದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲೇ ಯಾರೂ ಮಾಡದ ಒಂದು ಅಪರೂಪದ ದಾಖಲೆಯನ್ನು ಅವರು ಮಾಡಿ ಹೋಗಿದ್ದಾರೆ. ಒಂದೇ ಕುಟುಂಬದ ಮೂರು ತಲೆಮಾರಿನ ನಟರಿಗೆ ಅವರು ಹಾಡುವ ಮೂಲಕ ಅವರು ದಾಖಲೆ ಮಾಡಿದ್ದಾರೆ.

ಆ ಒಂದೇ ಕುಟುಂಬದ ಮೂರು ತಲೆಮಾರಿನ ನಾಯಕನಟರು ಯಾರು ಗೊತ್ತಾ? ಎನ್​.ಟಿ. ರಾಮರಾವ್​, ಬಾಲಕೃಷ್ಣ ಮತ್ತು ಜ್ಯೂನಿಯರ್​ ಎನ್​ಟಿಆರ್​ ... 60ರ ದಶಕದ ಕೊನೆಯಲ್ಲಿ ಎನ್​.ಟಿ. ರಾಮರಾವ್​ ಅವರಿಗೆ ಮೊದಲ ಬಾರಿಗೆ ಹಾಡಿದ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ನಂತರ 80ರ ದಶಕದಲ್ಲಿ ಮಗ ಬಾಲಕೃಷ್ಣ ಮತ್ತು 2000ರ ನಂತರ ಜ್ಯೂನಿಯರ್​ ಎನ್​.ಟಿ.ಆರ್​ ಅವರಿಗೆ ಹಾಡಿದ ಖ್ಯಾತಿ ಬಾಲು ಅವರಿಗಿದೆ.

ಇನ್ನು ಅದೆಷ್ಟು ಅಪ್ಪ-ಮಕ್ಕಳಿಗೆ ಅವರು ಹಾಡಿದ್ದಾರೋ ಲೆಕ್ಕ ಹಾಕುವುದು ಕಷ್ಟ. ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್​ ಮತ್ತು ಅವರ ಮಗ ನಾಗಾರ್ಜುನ ಅವರಿಗೆ ಬಾಲಸುಬ್ರಹ್ಮಣ್ಯಂ ಹಾಡಿದ್ದರು. ಕನ್ನಡದಲ್ಲಿ ಡಾ. ರಾಜಕುಮಾರ್​ ಮತ್ತು ಶಿವರಾಜಕುಮಾರ್​, ಕೃಷ್ಣ ಮತ್ತು ಮಹೇಶ್​ ಬಾಬು, ಶಿವಾಜಿ ಗಣೇಶನ್​ ಮತ್ತು ಪ್ರಭು ... ಹೀಗೆ ಪಟ್ಟಿ ದೊಡ್ಡದಿದೆ.