ಬೆಂಗಳೂರು: ಆ ಕಡೆ 'ಲೂಸಿಯಾ' ಪವನ್, 'ಧೂಮಂ' ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದರೆ, ಈ ಕಡೆ ಅವರ ಪತ್ನಿ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿರುವ ಪವನ್ ಪತ್ನಿ ಸೌಮ್ಯ ಜಗನ್ಮೂರ್ತಿ, ಇದೀಗ 'ಡಾಲರ್ಸ್ ಪೇಟೆ' ಎಂಬ ಹೊಸ ಚಿತ್ರದಲ್ಲಿ ನಟಿಸಿದ್ದಾರೆ.
ಮೋಹನ್ ಎನ್. ಮುನಿನಾರಾಯಣಪ್ಪ ನಿರ್ದೇಶನದ ಮೊದಲ ಚಿತ್ರ 'ಎ ಡೇ ಇನ್ ಡಾಲರ್ಸ್ ಪೇಟೆ’. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇತ್ತೀಚೆಗಷ್ಟೇ ಚಿತ್ರದ ಮೊದಲ ನೋಟದ ಪೋಸ್ಟರ್ ಬಿಡುಗಡೆಯಾಗಿತ್ತು. ಈಗ ಸೌಮ್ಯ ಅವರ ಪಾತ್ರವನ್ನು ಪರಿಚಯಿಸುವಂತಹ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಹೈಪರ್ ಲಿಂಕ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ ಕ್ಯಾಶಿಯರ್ ಪಾತ್ರವನ್ನು ನಿರ್ವಹಿಸಿದ್ದಾರೆ. ತಲೆಗೆ ಕಿರೀಟ ತೊಟ್ಟು, ಕೈಯಲ್ಲಿ ಗರಿಗರಿ ನೋಟು ಹಿಡಿದಿರುವ ಅವರ ಕ್ಯಾರೆಕ್ಟರ್ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರತಂಡದ ವತಿಯಿಂದ ಇನ್ನಷ್ಟು ಪಾತ್ರಗಳ ಪೋಸ್ಟರ್ ಬಿಡುಗಡೆಯಾಗುತ್ತದಂತೆ.
'ಎ ಡೇ ಇನ್ ಡಾಲರ್ಸ್ ಪೇಟೆ’ ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ, ಆಕರ್ಷ್ ಕಮಲ, ವೆಂಕಟ್ ರಾಜು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ಪೃಥ್ವಿ ಅಂಬರ್ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಸೂರಜ್ ಜೋಯಿಸ್ ಅವರ ಸಂಗೀತ ಮತ್ತು ಆನಂದ್ ಸುಂದರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರವನ್ನು ಪೂಜಾ.ಟಿ.ವೈ ನಿರ್ಮಿಸುತ್ತಿದ್ದಾರೆ.