ಕರುನಾಡ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಿಧನರಾದರೂ ಅಭಿಮಾನಿಗಳ ಮನದಲ್ಲಿ ಮಾತ್ರ ಎಂದೆಂದಿಗೂ ಜೀವಂತ. ಇದಕ್ಕೆ ಉದಾಹರಣೆ ಅಂದರೆ ಅದು ನಟ ಪುನೀತ್ ರಾಜ್ಕುಮಾರ್ ಅವರ ಕೊನೆಯ ಸಿನಿಮಾವನ್ನು ಅಭಿಮಾನಿ ದೇವರುಗಳು ಆಧರಿಸಿದ ರೀತಿ. ಅಭಿಮಾನಿಗಳಿಂದಲೇ ‘ಜೇಮ್ಸ್’ ಸೂಪರ್ ಡೂಪರ್ ಹಿಟ್ ಆಗಿದೆ. ರಿಲೀಸ್ ಆದ ಕೇವಲ ನಾಲ್ಕು ದಿನಕ್ಕೆ 100 ಕೋಟಿ ರೂಪಾಯಿ ಗಳಿಸಿದ ಚಿತ್ರವಾಗಿದೆ. ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ಸಿನಿಮಾದ ಅಬ್ಬರ, ಆರ್ಭಟವನ್ನು ಈಗಾಗಲೇ ನೋಡಿದ್ದೇವೆ. ಈ ಸಿನಿಮಾ ಸೃಷ್ಟಿಸಿದ ದಾಖಲೆಗಳು ಒಂದಲ್ಲ ಎರಡಲ್ಲ. ಅಂತಹ ಸಿನಿಮಾ ಶೀಘ್ರದಲ್ಲೇ ಒಟಿಟಿಯಲ್ಲಿ ಪ್ರಸಾರ ಆಗಲಿದೆ.
ಹೌದು, ಅಪ್ಪು ಅವರು ಹೀರೋ ಆಗಿ ನಟಿಸಿದ ಕೊನೆಯ 'ಜೇಮ್ಸ್' ಸಿನಿಮಾ ಒಟಿಟಿ ಪ್ರೀಮಿಯರ್ಗೆ ದಿನಗಣನೆ ಆರಂಭ ಆಗಿದೆ. ಸೋನಿ ಲಿವ್ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ 'ಜೇಮ್ಸ್' ಪ್ರಸಾರ ಆಗಲಿದೆ. ಆ ದಿನಾಂಕ ಯಾವುದು ಅಂತೀರಾ...? ಅಂದಹಾಗೆ, ಅಪ್ಪು ಅವರ ಸಿನಿಮಾವನ್ನು ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ವರ್ಷನ್ಗಳನ್ನು ಕೂಡಾ ಏ.14 ರಿಂದ ಸಿನಿಪ್ರೇಕ್ಷಕರು ವೀಕ್ಷಣೆ ಮಾಡಬಹುದು ಎಂದು ಸೋನಿ ಲಿವ್ ಸಂಸ್ಥೆ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಜೇಮ್ಸ್’ ಬಿಡುಗಡೆ ಆದಾಗ ನಟ ಶಿವರಾಜ್ಕುಮಾರ್, ನಟ ರಾಘವೇಂದ್ರ ರಾಜ್ಕುಮಾರ್, ನಟ ವಿನಯ್ ರಾಜ್ಕುಮಾರ್, ನಟ ಯುವ ರಾಜ್ಕುಮಾರ್ ಸೇರಿದಂತೆ ಅಣ್ಣಾವ್ರ ಕುಟುಂಬದ ಬಹುತೇಕರು ಚಿತ್ರಮಂದಿರಕ್ಕೆ ಬಂದು ಈ ಸಿನಿಮಾ ವೀಕ್ಷಿಸಿದ್ದರು. ಹಲವು ದಿನಗಳ ಬಳಿಕ ಈ ಸಿನಿಮಾ ನೋಡಿದ ಗೀತಾ ಶಿವರಾಜ್ಕುಮಾರ್ ಅವರು ತುಂಬಾನೆ ಎಮೋಷನಲ್ ಆಗಿದ್ದರು. ಅಪ್ಪು ನಿಧನರಾಗಿದ್ದ ಕಾರಣ ಈ ಸಿನಿಮಾ ಮೂಲಕ ಕೊನೆಯ ಬಾರಿ ಅಪ್ಪು ಅವರನ್ನು ಹೀರೋ ಆಗಿ ತೆರೆ ಮೇಲೆ ಮಿಂಚುವುದು ಕಂಡ ಅಭಿಮಾನಿಗಳು, ಚಿತ್ರಮಂದಿರದಿಂದ ಕಣ್ಣೀರು ಹಾಕುತ್ತಲೆ ಹೊರಬಂದರು.