ಸಿನಿವಾಣಿ

ವಿಡಿಯೋ ಗೇಮ್​ ಕೊಡಿಸಿ ಎಂದ ಅಭಿಮಾನಿಗೆ ಸೋನು ಕೊಟ್ಟ ಉತ್ತರ ಇದು ...

ಕಳೆದ ಕೆಲವು ತಿಂಗಳುಗಳಿಂದ ಸೋನು ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೋ, ಲೆಕ್ಕ ಇಡುವುದು ಕಷ್ಟ. ಹಸಿವು ಎಂದವರಿಗೆ ಊಟ ಹಾಕಿದರು. ಊರಿಗೆ ಹೋಗಬೇಕು ಎಂದವರಿಗೆ ಊರಿಗೆ ತಲುಪಿಸಿದರು. ಕೆಲಸ ಇಲ್ಲ ಎಂದವರಿಗೆ ಕೆಲಸ ಕೊಡಿಸಿದರು. ತಮ್ಮ ಕೈಲಾಗಿದ್ದನ್ನು ಮಾಡುತ್ತಲೇ ಬಂದಿರುವ ಸೋನು, ಈ ಬಾರಿ ಅಭಿಮಾನಿಯೊಬ್ಬನ ಮನವಿಯನ್ನು ತಿರಸ್ಕರಿಸಿದ್ದಾರೆ.

ಸೋನು ಅವರ ಅಭಿಮಾನಿಯೊಬ್ಬ, ಅವರಿಂದ ಒಂದು ಸಹಾಯ ಕೇಳಿದ್ದ. ಅದನ್ನು ಸೋನು ತಿರಸ್ಕರಿಸಿದ್ದಾರೆ. ಇಷ್ಟಕ್ಕೂ ಆ ಅಭಿಮಾನಿ ಕೇಳಿದ್ದಾದರೂ ಏನನ್ನು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಸೋನು ಅವರ ಅಭಿಮಾನಿ, ಪ್ಲೇಸ್ಟೇಶನ್​ 4 ಕೊಡಿಸುವಂತೆ ಮನವಿ ಸಲ್ಲಿಸಿದ್ದ.

ಈ ಕುರಿತು ಟ್ವೀಟ್​ ಮಾಡಿದ್ದ ಆತ, 'ನನಗೆ ಒಂದು ಪಿಎಸ್​ 4 ಕೊಡಿಸೋದಕ್ಕೆ ಸಾಧ್ಯವಾ? ನನ್ನ ಎಲ್ಲಾ ಸ್ನೇಹಿತರು ಲಾಕ್​ಡೌನ್​ನಲ್ಲಿ ಗೇಮ್ಸ್​ ಆಡುತ್ತಾ ಮಜಾ ಮಾಡುತ್ತಿದ್ದಾರೆ. ಬಹಳ ಬೋರ್​ ಆಗುತ್ತಿದೆ. ನೀವು ನನಗೆ ಪಿಎಸ್​ 4 ಕೊಡಿಸಿ' ಎಂದು ಹೇಳಿದ್ದ.

ಇದಕ್ಕೆ ಪ್ರತಿಕ್ರಿಯಿಸಿರುವ ಸೋನು, 'ನಿಜ ಹೇಳಬೇಕೆಂದರೆ, ಪಿಎಸ್​ ಇಲ್ಲದಿರುವುದೇ ನಿನಗೊಂದು ವರ. ಒಂದಿಷ್ಟು ಪುಸ್ತಕ ಓದು. ಬೇಕಾದರೆ, ಪುಸ್ತಕ ಕೊಡಿಸಬಲ್ಲೆ ' ಎಂದು ಅವರು ಉತ್ತರಿಸಿದ್ದಾರೆ.

ಇದಕ್ಕೆ ಸೋನು ಅವರ ಹಲವು ಅಭಿಮಾನಿಗಳು ಸಹ ಅನುಮೋದನೆಯನ್ನು ನೀಡಿದ್ದಾರೆ. ನಿಜ, ವಿಡಿಯೋ ಗೇಮ್​ ಆರೋಗ್ಯಕ್ಕೆ ಹಾನಿಕರ ಎಂದು ಹಲವರು ಉತ್ತರ ಕೊಟ್ಟಿದ್ದಾರೆ.