ಮುಂಬೈ: ಸೋನು ಸೂದ್ ಮತ್ತು ಕಂಗನಾ ರಣಾವತ್ ನಡುವಿನ ಮುಸುಕಿನ ಗುದ್ದಾಟ ಇಂದು-ನಿನ್ನೆಯದಲ್ಲ. ಒಂದು ಕಾಲಕ್ಕೆ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದವರು. 'ಮಣಿಕರ್ಣಿಕಾ' ಚಿತ್ರದಲ್ಲಿ ಜತೆಯಾಗಿ ಕೆಲಸ ಮಾಡಿದ್ದರು. ಆದರೆ, ಆ ಚಿತ್ರದ ನಡುವೆ ಅವರಿಬ್ಬರ ನಡುವೆ ಕಾರಣಾಂತರಗಳಿಂದ ಕಂದಕ ಏರ್ಪಟ್ಟಿತು. ಇದರಿಂದ ಸೋನು, ಆ ಚಿತ್ರದಿಂದಲೇ ಹೊರಬಂದರು.
ಇಷ್ಟಕ್ಕೂ ಸೋನು 'ಮಣಿಕರ್ಣಿಕಾ' ಚಿತ್ರದಿಂದ ಹೊರಬಂದಿದ್ದು ಯಾಕೆ? ತಾನು ಚಿತ್ರದ ನಿರ್ದೇಶನ ಪಟ್ಟವನ್ನು ಅಲಂಕರಿಸಿದ್ದರಿಂದ, ಸೋನು ಚಿತ್ರದಿಂದ ಹೊರಬಂದಿದ್ದಾಗಿ ಕಂಗನಾ ಹೇಳಿಕೊಂಡಿದ್ದರು. ಒಬ್ಬ ನಿರ್ದೇಶಿಕಿಯ ಕೆಳಗೆ ಕೆಲಸ ಮಾಡುವುದಕ್ಕೆ ಅವರ ಅಹಂ ಒಪ್ಪದಿದ್ದ ಕಾರಣದಿಂದಾಗಿ ಅವರು ಚಿತ್ರದಿಂದ ಹೊರವುಳಿದರು ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಸೋನು, ತಾನು ಈ ಹಿಂದೆಯೇ ನಿರ್ದೇಶಕಿಯರ ಜತೆಗೆ ಕೆಲಸ ಮಾಡಿರುವುದರಿಂದ ಯಾವುದೇ ಅಹಂ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು.
ಈಗ ಸೋನು, ಬಹಳ ದಿನಗಳ ನಂತರ 'ಮಣಿಕರ್ಣಿಕಾ' ಚಿತ್ರದಿಂದ ತಾನು ಯಾಕೆ ಹೊರಬರಬೇಕಾಯಿತು ಎಂಬ ಕಾರಣವನ್ನು ನೀಡಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಕಂಗನಾ ನನಗೆ ಹಳೆಯ ಸ್ನೇಹಿತೆ. ನನಗೆ ಆಕೆಯನ್ನು ನೋಯಿಸುವುದಕ್ಕೆ ಇಷ್ಟವಿಲ್ಲ. ಆದರೂ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಬೇಕಿದೆ. ಪ್ರಮುಖವಾಗಿ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿತ್ತು. ಆ ಸಂದರ್ಭದಲ್ಲಿ ಚಿತ್ರದ ನಿರ್ದೇಶಕರಾದ ಕ್ರಿಶ್ ಚಿತ್ರದಿಂದ ಹೊರನಡೆಯುತ್ತಿರುವುದಾಗಿ ಹೇಳಿದರು. ಕಂಗನಾ ಜತೆಗೆ ಕೆಲವು ಭಿನ್ನಾಭಿಪ್ರಾಯಗಳಿರುವುದರಿಂದ ಚಿತ್ರದಲ್ಲಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದರು' ಎಂದಿದ್ದಾರೆ ಸೋನು.
ಈ ವಿಷಯವಾಗಿ ಕಂಗನಾ ಜತೆಗೆ ಮಾತನಾಡಿದರಂತೆ ಸೋನು. 'ಕಂಗನಾ ಜತೆಗೆ ಮಾತನಾಡಿದೆ. ಆದರೆ, ಆಕೆ ಈ ಚಿತ್ರವನ್ನು ತಾನು ನಿರ್ದೇಶಿಸಬೇಕು ಎಂದುಕೊಂಡಿರುವುದಾಗಿ ಹೇಳಿದರು. ಅಷ್ಟೇ ಅಲ್ಲ, ನನ್ನ ಸಹಕಾರ ಕೇಳಿದರು. ಅಷ್ಟರಲ್ಲಾಗಲೇ ಕ್ರಿಶ್ ಬಹಳಷ್ಟು ಕೆಲಸ ಮುಗಿಸಿದ್ದರು ಮತ್ತು ಬಹಳ ಕಷ್ಟಪಟ್ಟು ಚಿತ್ರವನ್ನು ರೂಪಿಸಿದ್ದರು. ಅವರು ಶೂಟ್ ಮಾಡಿದ ನನ್ನ ಭಾಗದ ಶೇ 80ರಷ್ಟು ದೃಶ್ಯಗಳನ್ನು ಕತ್ತರಿಸುವುದಕ್ಕೆ ಕಂಗನಾ ಮುಂದಾಗಿದ್ದರು. ಅಷ್ಟೇ ಅಲ್ಲ, ಮುಂದೆ ಚಿತ್ರೀಕರಣವಾಗಬೇಕಿದ್ದ ದೃಶ್ಯಗಳು ಸಹ ಕಟ್ ಆಗಿತ್ತು. ಈ ಬಗ್ಗೆ ನನಗೆ ಬಹಳ ಬೇಸರವಾಯಿತು. ಈ ಕುರಿತು ಕಂಗನಾ ಹತ್ತಿರ ಮಾತನಾಡಿದೆ. ಆಕೆ ತನಗೆ ಬೇಕಾದ ಹಾಗೆಯೇ ಚಿತ್ರ ಮೂಡಿಬರಬೇಕು ಎಂದರು. ಈ ವಿಷಯ ನನಗೆ ಸರಿಬರಲಿಲ್ಲ' ಎನ್ನುತ್ತಾರೆ ಸೋನು.
'ಕಂಗನಾ ನನ್ನ ಒಳ್ಳೆಯ ಗೆಳತಿ ಇರಬಹುದು. ಆದರೆ, ಆಕೆ ಹೇಳಿದ ರೀತಿ ನನಗೆ ನಟನೆ ಮಾಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ನಾನು ಆ ಚಿತ್ರಕ್ಕೆ ಎಸ್ ಅಂದಿದ್ದು ನನ್ನ ಪಾತ್ರ ಮತ್ತು ಅದನ್ನು ರೂಪಿಸಿದ ನಿರ್ದೇಶಕರನ್ನು ನೋಡಿ. ಆದರೆ, ಈಗ ಎರಡೂ ಬದಲಾಗಿರುವುದರಿಂದ ಆ ಚಿತ್ರಕ್ಕೆ ನನ್ನ ಅವಶ್ಯಕತೆ ಇಲ್ಲ ಎಂದನಿಸಿತು. ಆ ಚಿತ್ರಕ್ಕಾಗಿ ನಾನು ನಾಲ್ಕು ತಿಂಗಳ ಕಾಲ ಕಾಲ್ಶೀಟ್ ಕೊಟ್ಟಿದ್ದಷ್ಟೇ ಅಲ್ಲ, ಅದರಿಂದ ಕೆಲವು ಚಿತ್ರಗಳನ್ನೂ ಬಿಟ್ಟಿದ್ದೆ. ಇಷ್ಟೆಲ್ಲಾ ಆಗಿಯೂ ಈ ರೀತಿ ಆಗಿದ್ದು ಬೇಸರವಾಯಿತು. ಅದೇ ಕಾರಣಕ್ಕೆ ನಾನು ಚಿತ್ರದಿಂದ ಹೊರಬಂದೆ' ಎಂದು ಸೋನು ಹೇಳಿಕೊಂಡಿದ್ದಾರೆ.