ಸಿನಿವಾಣಿ

‘ನೀನೊಬ್ಬ ವಂಚಕ’ ಎಂದು ಜರಿದವರಿಗೆ ಸೋನು ಸೂದ್​ ಕೊಟ್ಟ ಉತ್ತರ ಹೀಗಿದೆ...

manjunathktgns

ಮುಂಬೈ: ಬಾಲಿವುಡ್​ ನಟ ಸೋನು ಸೂದ್​ ಲಾಕ್​ಡೌನ್ ಅವಧಿಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದರು. ಸಾಕಷ್ಟು ಜನರ ಕಷ್ಟಕ್ಕೆ ಸ್ಪಂದಿಸಿದ್ದರು. ಉದ್ಯೋಗವನ್ನೂ ಕೊಡಿಸಿದ್ದರು ಈಗಲೂ ಆ ಕೆಲಸವನ್ನು ಅವರು ಮುಂದುವರಿಸಿದ್ದಾರೆ. ಇದೆಲ್ಲದರ ನಡುವೆ ಅವರ ಕೆಲಸದ ವಿರುದ್ಧ ಒಂದಷ್ಟು ನೆಗೆಟಿವ್​ ಕಮೆಂಟ್​ಗಳು ಹರಿದಾಡಿವೆ. ಟ್ರೋಲ್​ ಮಾಡಿದ್ದಾರೆ. ಅದೆಲ್ಲದಕ್ಕೆ ಸೋನು ಸೂದ್​ ಉತ್ತರ ನೀಡಿದ್ದಾರೆ.

ಹೌದು, ಸೋನು ಸೂದ್​ಗೆ ಸೋಷಿಯಲ್​ ಮೀಡಿಯಾದಲ್ಲಿ ಕೆಲವರು ವಂಚಕ ಎಂದು ಜರಿದಿದ್ದಾರೆ. ‘ಯಾರು ನಾನೇನು ಮಾಡಿಲ್ಲ ಎಂದು ಹೇಳುತ್ತಿದ್ದಾರೋ ಅದಕ್ಕೆ ನನ್ನ ಬಳಿ ಸಾಕಷ್ಟು ದಾಖಲೆಗಳಿವೆ. 7 ಲಕ್ಷಕ್ಕೂ ಅಧಿಕ ಮಂದಿಗೆ ಸಹಾಯ ಮಾಡಿದ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಅವರ ವಿಳಾಸ, ಫೋನ್​ ನಂಬರ್​ ಮತ್ತು ಆಧಾರ್​ ಕಾರ್ಡ್​ ನಂಬರ್​ ಸಹ ನನ್ನ ಬಳಿ ಇದೆ. ವಿದೇಶದಿಂದ ಯಾರೆಲ್ಲ ವಿದ್ಯಾರ್ಥಿಗಳು ಬಂದಿದ್ದಾರೋ ಅವರೆಲ್ಲ ದಾಖಲೆ ನನ್ನ ಬಳಿ ಇದೆ. ಇದ್ಯಾವುದನ್ನೂ ನಾನು ಸಾಬೀತು ಪಡಿಸುವುದಿಲ್ಲ. ಇಷ್ಟೆಲ್ಲ ಹೇಳುವುದರ ಬದಲು, ನೀವೇ ಮನೆಯಿಂದ ಹೊರಬಂದು ಒಂದಷ್ಟು ಜನರಿಗೆ ಸಹಾಯ ಮಾಡಿ ನೋಡೋಣ ಎಂದಿದ್ದಾರೆ’

ಈ ಹಿಂದೆಯೂ ಈ ರೀತಿಯ ನಿಂದನೆಗಳನ್ನು ಸೋನು ಸೂದ್​ ಎದುರಿಸಿದ್ದರು. ರಾಜಕೀಯಕ್ಕೆ ಬರುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದೀರಿ ಎಂದಿದ್ದರು. ಅದಕ್ಕೂ ಸೂನು ಉತ್ತರ ನೀಡಿದ್ದರು. ‘ಕಳೆದ 10 ವರ್ಷಗಳಿಂದ ರಾಜಕೀಯಕ್ಕೆ ಬನ್ನಿ ಎಂದು ಸಾಕಷ್ಟು ಅವಕಾಶಗಳು ಬರುತ್ತಿವೆ. ನೀನೊಬ್ಬ ಗ್ರೇಟ್​ ಲೀಡರ್​ ಎಂದು ಸುಮಾರು ಮಂದಿ ಹೇಳಿದ್ದಾರೆ. ಆದರೆ, ಒಬ್ಬ ನಟನಾಗಿ ನಾನಿನ್ನೂ ತುಂಬ ದೂರ ಪ್ರಯಾಣಿಸಬೇಕಿದೆ. ನಾನು ಮಾಡಬೇಕಿರುವ ಕೆಲಸ ಇನ್ನೂ ತುಂಬ ಇದೆ. ಬರುವುದಾದರೇ ಯಾವತ್ತೋ ನಾನು ಬಂದುಬಿಡುತ್ತಿದ್ದೆ. ಆದರೆ, ಏಕಕಾಲದಲ್ಲಿ ಎರಡು ದೋಣಿ ಮೇಲಿನ ನಡಿಗೆ ಒಳ್ಳೆಯದಲ್ಲ’ ಎಂದು ಹೇಳಿಕೊಂಡಿದ್ದರು. (ಏಜೆನ್ಸೀಸ್​)